ಮುಖ್ಯಮಂತ್ರಿ ಕುಮಾರಸ್ವಾಮಿ ಭಾವನಾತ್ಮಕ ಜೀವಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭಾವನಾತ್ಮಕ ಜೀವಿ, ಅವರು ಕಾರ್ಯ ಕ್ರಮವೊಂದರಲ್ಲಿ ಕಣ್ಣೀರು ಹಾಕಿದ ಬಗ್ಗೆ ಕಾಂಗ್ರೆಸ್ ನಾಯಕರು ನಾನಾ ಹೇಳಿಕೆಗಳನ್ನು ನೀಡಿದ್ದು ಸರಿಯಲ್ಲ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರಿಗೆ ಆಡಳಿತ ನಡೆಸಲು ನಾವೆಲ್ಲ ಸಹಕರಿಸೋಣ, ಚಿಕ್ಕಂದಿನಿಂದಲೂ ಮುಖ್ಯಮಂತ್ರಿ ಗಳನ್ನು ನೋಡಿದ್ದೇನೆ. ಈ ಹಿಂದೆ ಸಾಕಷ್ಟು ವಿಚಾರಗಳಲ್ಲಿ ಕಣ್ಣೀರು ಹಾಕಿದ್ದು ಇದೆ ಎಂದರು. ಮುಖ್ಯಮಂತ್ರಿ ಸಂತೋಷವಾಗಿ ದ್ದರೆ ರಾಜ್ಯವೂ ಸಂತೋಷವಾಗಿರುತ್ತದೆ, ನಾವೆಲ್ಲರೂ ಸೇರಿ ಸರ್ಕಾರ ವನ್ನು ಬಲಪಡಿಸಬೇಕಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ವಿಕಲಚೇತನರನ್ನು ನೋಡಿ ಕಣ್ಣೀರು ಹಾಕಿದ್ದರು, ಅವರು ಸ್ವಲ್ಪ ಭಾವನಾತ್ಮಕ ಜೀವಿ ಎಂದರು. ಕಾಂಗ್ರೆಸ್ ಪಕ್ಷದ ತಾಂತ್ರಿಕ ವಿಚಾರದ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡುವುದು ಬೇಡ. ಮುಂದೆ ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಸಲಹೆ ನೀಡಿದರು.

ಬಿಜೆಪಿಯವರಿಗೆ ಅಷ್ಟೊಂದು ಆತುರ ಬೇಡ. ದಕ್ಷಿಣ ಭಾರತದ ಒಂದು ಮೂಲೆಯಲ್ಲಿ ನಾವು ಆಡಳಿತ ಮಾಡುತ್ತಿದ್ದೇವೆ, ಸ್ವಲ್ಪ ದಿನ ಕಾದು ನಮ್ಮ ಆಡಳಿತ ನೋಡಿ ಎಂದು ತಿರುಗೇಟು ನೀಡಿದರು.