ಚಿಕ್ಕಮಗಳೂರು ರೈಲು ನಿಲ್ದಾಣ `ಅತ್ಯುತ್ತಮ’

ಮೈಸೂರು,ಆ.1(ವೈಡಿಎಸ್)-ನೈರುತ್ಯ ರೈಲ್ವೆ ಮೈಸೂರು ವಿಭಾಗದಲ್ಲಿ ಚಿಕ್ಕಮಗಳೂರು ರೈಲು ನಿಲ್ದಾಣವು ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣ ಪ್ರಶಸ್ತಿಗೆ ಭಾಜನ ವಾಯಿತು. ಯಾದವಗಿರಿಯ ಚಾಮುಂಡಿ ರೈಲ್ವೆ ಕ್ಲಬ್‍ನಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗದ ವತಿಯಿಂದ ಆಯೋಜಿಸಿದ್ದ 64ನೇ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಅತ್ಯುತ್ತಮ ವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣವಾಗಿ ಚಿಕ್ಕಮಗಳೂರು(ಪ್ರ), ಶಿವಮೊಗ್ಗ(ದ್ವಿ) ಪ್ರಶಸ್ತಿ ಪಡೆದರೆ, ಸುಬ್ರಹ್ಮಣ್ಯ ರೋಡ್ ವಿಶ್ರಾಂತ ಕೊಠಡಿಗೆ-ಅತ್ಯುತ್ತಮವಾಗಿ ನಿರ್ವ ಹಿಸಲ್ಪಟ್ಟ ಚಾಲಕರ ವಿಶ್ರಾಂತಿ ಕೊಠಡಿ’ ಪ್ರಶಸ್ತಿ ಹಾಗೂ ಮೈಸೂರಿನ ಎಸ್ ಅಂಡ್ ಟಿ ಕಚೇರಿ `ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಕಚೇರಿ’ ಪ್ರಶಸ್ತಿ ಪಡೆದುಕೊಂಡಿತು.

ಡಿಆರ್‍ಎಂ ಅಪರ್ಣಾ ಗಾರ್ಗ್ ಅವರು ಪ್ರಶಸ್ತಿ ವಿತರಿಸಿದರು. ನಂತರ ಮಾತನಾಡಿ, 2018-19ನೇ ಸಾಲಿನಲ್ಲಿ ರೈಲ್ವೆ ಡಬ್ಲಿಂಗ್ ಕಾಮಗಾರಿ ನಡೆಯುತ್ತಿದ್ದರೂ ರೈಲು ಸಂಚಾರ ಸಮಯದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಶೇ.95ರಷ್ಟು ಸಮಯಪಾಲನೆ ಮಾಡಿದ್ದೇವೆ ಎಂದರು. ವಿಭಾಗದ ಗಳಿಕೆಯಲ್ಲಿ ನಿಗದಿತ ಗುರಿಗಿಂತ ಕಡಿಮೆ ಆದಾಯ ವಾಗಿದೆ. ತೆಗೆದು ಹಾಕಬೇಕಿದ್ದ 41 ಮಾನವರಹಿತ ಲೆವೆಲ್ ಕ್ರಾಸಿಂಗ್‍ಗಳ 18 ಅನ್ನು ತೆಗೆಯಲಾಗಿದೆ. 18 ಕಿಮೀ ರೈಲ್ವೆ ಡಬ್ಲಿಂಗ್ ಕೆಲಸ ಪೂರ್ಣಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ವಿಭಾಗಗಳಿಂದ 150ಕ್ಕೂ ಹೆಚ್ಚು ಮಂದಿಗೆ ಪ್ರಶಸ್ತಿ ವಿತರಿಸಲಾಯಿತು. ಎಡಿಆರ್‍ಎಂ ದೇವಸಹಾಯಂ, ಡಿಪಿಓ ಪ್ರಸಾದ್ ಉಪಸ್ಥಿತರಿದ್ದರು. ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.