ಶೀಘ್ರ ಖಾಲಿ ನಿವೇಶನಗಳ  ಸ್ವಚ್ಛತಾ ಕಾರ್ಯಾಚರಣೆ ಆರಂಭ

ಮೈಸೂರು: ಮೈಸೂರು ನಗರದ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ-ಗಂಟಿಗಳನ್ನು ಕಿತ್ತು ಸ್ವಚ್ಛಗೊಳಿಸುವ ಕಾರ್ಯಾ ಚರಣೆಯನ್ನು ಶೀಘ್ರ ಆರಂಭಿಸ ಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್ ಅವರು ತಿಳಿಸಿದ್ದಾರೆ.

10-15 ವರ್ಷಗಳಿಂದ ಮನೆಯನ್ನೂ ಕಟ್ಟದೇ, ಆಗಿಂದಾಗ್ಗೆ ಸ್ವಚ್ಛಗೊಳಿಸಿಕೊಳ್ಳದ ಕಾರಣ ನಿವೇಶನಗಳಲ್ಲಿ ಗಿಡ-ಗಂಟಿ ಬೆಳೆದು ಹಾವು, ಹಲ್ಲಿಗಳಿಗೆ ತಾಣವಾಗಿದ್ದಲ್ಲದೇ ಅಲ್ಲಿಗೆ ಸಾರ್ವಜನಿಕರು ಕಸ ತಂದು ಸುರಿಯುತ್ತಿದ್ದರು.

ಇದರಿಂದ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಉಂಟಾಗು ತ್ತಿದ್ದು, ಕಳ್ಳ-ಕಾಕರ ಕಾರ್ಯಾಚರಣೆಗೂ ಅನುಕೂಲವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಿವೇಶನಗಳನ್ನು ಸ್ವಚ್ಛ ಗೊಳಿಸುವಂತಹ ನೋಟಿಸ್ ಜಾರಿ ಮಾಡಲಾಗಿತ್ತಾದರೂ,
ಮಾಲೀಕರು ಕ್ರಮ ವಹಿಸಿರಲಿಲ್ಲ ಎಂದರು. ಕಡೆಗೆ ಪಾಲಿಕೆಯಿಂದಲೇ ಸ್ವಚ್ಛಗೊಳಿಸಲು ನಿರ್ಧರಿಸಿ ಆಸ್ತಿ ತೆರಿಗೆಯೊಂದಿಗೆ ನಿವೇಶನ ಸ್ವಚ್ಛಗೊಳಿಸಲು ಪ್ರತಿ ಚದರಡಿಗೆ 50 ಪೈಸೆಯಂತೆ ಸ್ವಚ್ಛತಾ ಸೆಸ್ ಅನ್ನು ಸಂಗ್ರಹಿಸಲು ಸೂಚಿಸಲಾಗಿತ್ತು.

ಈಗ ಆ ಸೆಸ್‍ನಡಿ ಎಷ್ಟು ಹಣ ವಸೂಲಿ ಮಾಡಲಾಗಿದೆ ಎಂಬ ಮಾಹಿತಿಯನ್ನು ಎಲ್ಲಾ 9 ವಲಯ ಕಚೇರಿಗಳಿಂದ ಪಡೆದು, ಆ ಹಣ ಬಳಸಿಕೊಂಡು ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಒಂದು ವಾರದೊಳಗಾಗಿ ಆರಂಭಿಸುತ್ತೇವೆ ಎಂದು ಜಗದೀಶ್ ತಿಳಿಸಿದರು. ಕೆಲ ನಿವೇಶನಗಳಲ್ಲಿ ಸಂಗ್ರಹವಾಗಿ ರುವ ಪೇಪರ್, ಗಿಡ-ಗಂಟಿಗಳಿಗೆ ಬೆಂಕಿ ಹಚ್ಚುತ್ತಿದ್ದು, ಅದರಿಂದ ನೆರೆಹೊರೆಯ ನಿವಾಸಿಗಳಿಗೆ ಹೊಗೆ, ಬೆಂಕಿ ತಾಪ ತಟ್ಟುವ ಜೊತೆಗೆ ಗಾಳಿಯಿಂದ ಬೆಂಕಿ ಹರಡುವ ಆತಂಕವೂ ಎದುರಾಗುತ್ತಿದೆ ಎಂಬ ದೂರುಗಳೂ ಸಹ ಕೇಳಿಬರುತ್ತಿದ್ದವು.