ಪೊಲೀಸರಿಂದ ಹಕ್ಕಿ-ಪಿಕ್ಕಿ ಜನರ ಗುಡಿಸಲು ತೆರವು: ಡಿಸಿ ಕಚೇರಿ ಮುಂದೆ ಪ್ರತಿಭಟನೆ

ಹಾಸನ, ಜೂ.26- ತಟ್ಟೆಹಳ್ಳಿಯಲ್ಲಿ ವಾಸವಾಗಿರುವ ಹಕ್ಕಿ ಪಿಕ್ಕಿ ಜನಾಂಗದವರ ಗುಡಿಸಲುಗಳನ್ನು ಪೊಲೀಸರು ರಾತ್ರಿ ಬಂದು ದಿಢೀರ್ ತೆರವುಗೊಳಿಸಿದ್ದಾರೆ. ಪ್ರಶ್ನಿಸಿದ ನಿವಾಸಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಲವತ್ತುಕೊಂಡಿರುವ ಹಕ್ಕಿ-ಪಿಕ್ಕಿ ಜನಾಂಗದವರು, ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಗುಡಿಸಲುಗಳನ್ನು ಬಲಪ್ರಯೋಗಿಸಿ ತೆರವುಗೊಳಿಸಿದ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರನ್ನು ಕೂಡಲೇ ಅಮಾನತು ಗೊಳಿಸಬೇಕೆಂದು ಆಗ್ರಹಿಸಿದರು.

ಬೇಲೂರು ತಾಲೂಕು ಮಾದಿಹಳ್ಳಿ ಹೋಬಳಿಯ ಅಂಗಡಿಹಳ್ಳಿಯಲ್ಲಿ 2 ತಲೆಮಾರು ಗಳಿಂದ ವಾಸವಿದ್ದೇವೆ. ಬುಡಕಟ್ಟು ಜನಾಂಗದ ನಾವುಗಳೆಲ್ಲಾ ಅಲೆಮಾರಿಗಳಾಗಿದ್ದೇವೆ. ನಮ್ಮಲ್ಲಿ ಯಾರೊಬ್ಬರಿಗೂ ಜಮೀನು ಇಲ್ಲದಿರುವುದರಿಂದ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸಬೇಕಿದೆ. ನಮ್ಮ ಗುಡಿಸಲು ತೆರವಿಗೆ ಯಾವ ಆದೇಶ ಇಲ್ಲದಿದ್ದರೂ ಮಂಗಳವಾರ ರಾತ್ರಿ ಹಳೆಬೀಡು ವ್ಯಾಪ್ತಿಯ ಪಿಎಸ್‍ಐ ಭರತ್ ಗೌಡ ಮತ್ತು ಸಿಬ್ಬಂದಿ ಗ್ರಾಮಕ್ಕೆ ಬಂದು ನಮ್ಮ ಮೇಲೆ ಹಲ್ಲೆ ನಡೆಸಿ ಗುಡಿಸಲುಗಳನ್ನು ಧ್ವಂಸ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪಿಎಸ್‍ಐ ಭರತ್‍ಗೌಡ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ನಮಗೆ ನ್ಯಾಯ ಕೊಡಿಸಿ ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭ ಬುಡಕಟ್ಟು ಹಕ್ಕಿ-ಪಿಕ್ಕಿ ಜನಾಂಗದ ಕುನಿಷಾ, ಉದಯಕುಮಾರ್, ಪರಿಮಳ, ಲಾಲೇಶ್, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಆರ್‍ಪಿಐ ಸತೀಶ್, ಯುವ ಘಟಕದ ಜಿಲ್ಲಾಧ್ಯಕ್ಷ ಮಧು ನಿಟ್ಟೂರು, ಮೇರಿ ಜೋಸೆಫ್, ರಂಜಿತ್ ಕುಮಾರ್ ಮತ್ತಿತರರಿದ್ದರು.