ರೈತರ 49 ಸಾವಿರ ಕೋಟಿ ಸಾಲ ಮನ್ನಾ ಮಾಡಿದರೂ ಸಿಎಂ ಕುಮಾರಸ್ವಾಮಿ ಅವರಿಗೆ ಮನ್ನಣೆ ಸಿಕ್ಕಿಲ್ಲ

ಚುಂಚನಕಟ್ಟೆ: ಈವರೆಗೆ ರಾಜ್ಯದ ಯಾವ ಮುಖ್ಯಮಂತ್ರಿಗಳು ಮಾಡಲು ಸಾಧ್ಯವಾಗದಿದ್ದನ್ನು ಹೆಚ್.ಡಿ.ಕುಮಾರಸ್ವಾಮಿ ಮಾಡಿದ್ದಾರೆ. ಅವರು 49 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದರು. ಇಷ್ಟಾದರೂ ಅವರನ್ನು ಅಭಿನಂದಿಸುವ ಕೆಲಸ ಆಗುತ್ತಿಲ್ಲ. ಇದಕ್ಕೆ ಜಾತಿ ವ್ಯವಸ್ಥೆಯೇ ಕಾರಣ ಎಂದು ಸಚಿವ ಸಾ.ರಾ.ಮಹೇಶ್ ವಿಷಾದಿಸಿದರು.

ತಾಲೂಕಿನ ಲಾಳಂದೇವನಹಳ್ಳಿ ಗ್ರಾಮದ ಬಳಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಇಷ್ಟು ದೊಡ್ಡ ಮಟ್ಟದ ಸಾಲಮನ್ನಾ ಮಾಡಿದರೂ, ಮಹಿಳಾ ಸ್ವ-ಸಹಾಯ ಸಂಘ, ನೇಕಾರರು ಮತ್ತು ಮೀನುಗಾರರು ಪಡೆದಂತಹ ಸಾಲಮನ್ನಾ ಮಾಡುವಂತೆ ಒತ್ತಡ ಹೇರುತ್ತಿರುವುದರ ಜತೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್ ನೀಡುವಂತೆ ಪ್ರತಿಭಟನೆ ಮಾಡಲಾಗುತ್ತಿದೆ.

ಸಾಲಮನ್ನಾಕ್ಕೆ ಹಣ ಸಂಗ್ರಹಿಸುವ ದೃಷ್ಟಿಯಿಂದ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲೆ 1 ರೂ., ವಿದ್ಯುತ್ ಬಿಲ್ 20 ಪೈಸೆ ಮತ್ತು ಅಬಕಾರಿ ಶುಲ್ಕ ಹೆಚ್ಚಳ ಮಾಡಿರುವುದಕ್ಕೆ ಬೊಬ್ಬೆ ಹೊಡೆಯುವ ಬಿಜೆಪಿಯವರು, ಕೇಂದ್ರ ಸರ್ಕಾರ ಲೀಟರ್ ಪೆಟ್ರೋಲ್‍ಗೆ 20 ರೂ.ಗಳನ್ನು ಹೆಚ್ಚಳ ಮಾಡಿದರೂ ಪ್ರಶ್ನೆ ಮಾಡುತ್ತಿಲ್ಲ. ದೃಶ್ಯ ಮಾಧ್ಯಮಗಳು ಕೂಡ ರಾಜ್ಯ ಸರ್ಕಾರದ ವಿಚಾರವನ್ನೇ ದೊಡ್ಡದು ಮಾಡಿ ಚರ್ಚೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕೇವಲ 37 ಶಾಸಕರ ಬಲ ಹೊಂದಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಡುವ ಒಳ್ಳೆಯ ಕೆಲಸಕ್ಕೆ ಅಭಿನಂದನೆ ಸಲ್ಲಿಸಲು ಜಾತಿ ವ್ಯವಸ್ಥೆ ಅಡ್ಡ ಬಂದಿದ್ದು, ಚುನಾವಣೆಯಲ್ಲಿ ಜೆಡಿಎಸ್ ಕಡಿಮೆ ಶಾಸಕರು ಚುನಾಯಿತರಾಗಲು ಇದೇ ಕಾರಣ. ಎರಡು ವರ್ಗದ ಜನತೆ ನಮಗೆ ಮತ ನೀಡಿದ್ದರೆ ಕನಿಷ್ಠ 70 ಮಂದಿ ಶಾಸಕರು ಆಯ್ಕೆಯಾಗುವ ಅವಕಾಶ ಇತ್ತು ಎಂದು ಅಭಿಪ್ರಾಯಪಟ್ಟರು.

ಕೋಮುವಾದಿ ಬಿಜೆಪಿಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಅಪಪ್ರಚಾರ ಮತ್ತು ಭಯದಿಂದ ಮತ ನೀಡಲಿಲ್ಲ. ಮತ್ತೊಂದು ವರ್ಗ ಜೆಡಿಎಸ್ ಪಕ್ಷವನ್ನು ದ್ವೇಷಿಸುವ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯನವರು ಜೆಡಿಎಸ್ ತೊರೆದ ನಂತರ ಜಾತಿ ಪ್ರೇಮದಿಂದ ನಮಗೆ ಮತ ನೀಡುತ್ತಿಲ್ಲ. ಜಾತಿ ವ್ಯವಸ್ಥೆ ಸಂಪೂರ್ಣವಾಗಿ ಹೋಗುವವರೆಗೂ ಈ ದೇಶ ಅಭಿವೃದ್ದಿ ಹೊಂದಲು ಸಾಧ್ಯವಿಲ್ಲ ಎಂದರು.