ಉಪಚುನಾವಣೆಯಲ್ಲಿ ಸಿಎಂ, ಸಚಿವರು ಸಕ್ರಿಯ ರಾಜ್ಯದಲ್ಲಿ ಆಡಳಿತ ಯಂತ್ರ ನಿಷ್ಕ್ರಿಯ:  ರಾಜ್ಯಪಾಲರಿಗೆ ಕಾಂಗ್ರೆಸ್ ದೂರು

ಬೆಂಗಳೂರು, ನ.28(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಸಂಪುಟ ಪೂರ್ಣ ಪ್ರಮಾಣದಲ್ಲಿ ಉಪಚುನಾವಣೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಕಾಂಗ್ರೆಸ್ ಇಂದಿಲ್ಲಿ ರಾಜ್ಯಪಾಲರಿಗೆ ದೂರು ನೀಡಿದೆ. ರಾಜಭವನಕ್ಕೆ ತೆರಳಿದ ಕೆಪಿಸಿಸಿಯ ಮುಖಂಡರ ನಿಯೋಗ ರಾಜ್ಯಪಾಲ ವಾಜುಭಾಯ್ ವಾಲಾ ಅವರ ಅನುಪಸ್ಥಿತಿಯಲ್ಲಿ ಅಧಿಕಾರಿಗಳಿಗೆ ಮನವಿ ಪತ್ರ ನೀಡಿತು. ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಅಭಿ ವೃದ್ಧಿಯ ವಿಷಯದಲ್ಲಿ ಹಿನ್ನಡೆಯಾಗುತ್ತಿದೆ ಎಂಬುದಾಗಿ ಈ ಹಿಂದೆ ರಾಜ್ಯ ಪಾಲರು ಸಮ್ಮಿಶ್ರ ಸರ್ಕಾರಕ್ಕೆ ಸೂಚನೆ ರವಾನಿಸಿ ಕಾಳಜಿ ವ್ಯಕ್ತಪಡಿಸಿದ್ದರು.

ಉಪಚುನಾವಣೆಯಲ್ಲಿ ಸಂಪುಟದ ಎಲ್ಲಾ ಸಚಿವರು ಪ್ರಚಾರದಲ್ಲಿ ತೊಡ ಗಿಸಿಕೊಂಡಿದ್ದರಿಂದ ವಿಧಾನಸೌಧದಲ್ಲಿ ಆಡಳಿತ ಶೂನ್ಯದಂತೆ ಭಾಸವಾಗುತ್ತಿದೆ. ಸಚಿವರ ಗೈರು ಹಾಜರಿಯಲ್ಲಿ ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳು ತ್ತಿದ್ದು, ಅಧಿಕಾರಿಗಳನ್ನು ಭೇಟಿ ಮಾಡಲು ಸಾರ್ವಜನಿಕರಿಂದ ಸಾಧ್ಯವಾಗುತ್ತಿಲ್ಲ, ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡು, ಪ್ರಮುಖ ಕಡತಗಳು ಇದ್ದಲ್ಲೇ ಇವೆ. ಉಪ ಚುನಾವಣೆಗೆ ಆಡಳಿತ ಯಂತ್ರ ದುರುಪಯೋಗವಾಗುತ್ತಿದೆ, ಮುಖ್ಯ ಮಂತ್ರಿ ಯಡಿಯೂರಪ್ಪ ಜಾತಿ ಆಧಾ ರದ ಮೇಲೆ ಮತಯಾಚನೆ ಮಾಡಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಾರಿನಲ್ಲಿ ಹಣ ಸಾಗಿಸುತ್ತಿರುವುದು ಪತ್ತೆ ಯಾಗಿ, ಕಾರಿನ ಚಾಲಕನ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಅಭ್ಯರ್ಥಿ ಗಳು ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಈ ಎಲ್ಲಾ ಮಾಹಿತಿಗಳ ಕುರಿತು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದರೂ, ಆಯೋಗ ಯಾವುದೇ ಕ್ರಮಕೈಗೊಂಡಿಲ್ಲ. ನ್ಯಾಯ ಸಮ್ಮತ ಚುನಾವಣೆ ನಡೆಸುವಂತೆ ಚುನಾ ವಣಾ ಆಯೋಗಕ್ಕೆ ತಾಕೀತು ಮಾಡಿ ಎಂದು ಕಾಂಗ್ರೆಸ್ ನಿಯೋಗ ರಾಜ್ಯ ಪಾಲರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದೆ.