ಮೈತ್ರಿ ಸರ್ಕಾರ ಪತನ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್‍ನ 20 ಶಾಸಕರಲ್ಲಿ ಐವರ ಗೈರು ಹಾಗೂ 15 ಮಂದಿಯ ರಾಜೀನಾಮೆಯಿಂದ ಅಸ್ಥಿರಗೊಂಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊನೆಗೂ ಪತನವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತದ ನಿರ್ಣಯವನ್ನು ಇಂದು ರಾತ್ರಿ ಏಳು ಇಪ್ಪತ್ತಕ್ಕೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಮತಕ್ಕೆ ಹಾಕಿದಾಗ, ಅದರ ಪರವಾಗಿ 99 ಮತಗಳು ಬಿದ್ದರೆ, ಅದರ ವಿರುದ್ಧ 105 ಮತಗಳು ಬಿದ್ದವು. 6 ಮತಗಳಿಂದ 14 ತಿಂಗಳ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತು.

ತಮ್ಮ ಸರ್ಕಾರ ವಿದ್ಯುಕ್ತವಾಗಿ ಪತನಗೊಂಡ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ರಾಜಭವನಕ್ಕೆ ತೆರಳಿ, ರಾಜ್ಯಪಾಲ ವಜುಬಾಯ್ ವಾಲಾ ಅವರಲ್ಲಿ ರಾಜೀನಾಮೆ ಸಲ್ಲಿಸಿದರು. ಮುಂದಿನ ಸರ್ಕಾರ ರಚನೆ ವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆ ಯುವಂತೆ ರಾಜ್ಯಪಾಲರು ಈ ವೇಳೆ ಸೂಚಿಸಿದ್ದಾರೆ.

ಕುಮಾರಸ್ವಾಮಿ ನಿರ್ಗಮನದೊಂದಿಗೆ ಯಡಿ ಯೂರಪ್ಪ ನೂತನ ಸಿಎಂ ಹುದ್ದೆಗೇರುವ ಕ್ಷಣಗಳು ಹತ್ತಿರವಾಗಿವೆ. ಜುಲೈ ಹನ್ನೆರಡರಂದು ಆರಂಭ ವಾದ ವಿಧಾನಮಂಡಲ ಅಧಿವೇಶನದ ಆರಂಭದ ದಿನವೇ ಸಿಎಂ ಕುಮಾರಸ್ವಾಮಿ ಅವರು, ತಮ್ಮ ಸರ್ಕಾರಕ್ಕೆ ಬಹುಮತವಿಲ್ಲ ಎಂಬ ಭಾವನೆ ದಟ್ಟವಾಗಿರುವುದರಿಂದ ವಿಶ್ವಾಸಮತ ಕೋರಲು ಬಯಸಿದ್ದೇನೆ, ಅವಕಾಶ ನೀಡಿ ಎಂದು ಸ್ಪೀಕರ್ ಅವರನ್ನು ಕೋರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ವಿಶ್ವಾಸ ಮತ ಯಾಚನೆಗೆ ಸ್ಪೀಕರ್ ರಮೇಶ್ ಕುಮಾರ್ ಜು.18ರಂದು ಅವಕಾಶ ಮಾಡಿಕೊಟ್ಟರಾ ದರೂ, ವಿಷಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಆಟ, ಪ್ರತಿ-ಆಟಗಳು ತಾರಕಕ್ಕೇರಿ ಮುಂದೇನು? ಎಂಬ ಕುತೂಹಲ ಸೃಷ್ಟಿಯಾಗಿತ್ತು. ವಿಶ್ವಾಸ ಮತ ಯಾಚನೆ ಮಾಡಿದರೂ ಅದನ್ನು ಮತಕ್ಕೆ ಹಾಕಲು ಅವಕಾಶ ಸಿಗದಿದ್ದರಿಂದ ಬಿಜೆಪಿ ಕೆರಳಿದ್ದರೆ, ದಿನದಿಂದ ದಿನಕ್ಕೆ ಗಡುವು ಕೇಳುತ್ತಾ ಅದರ ಕೆರಳುವಿಕೆಯನ್ನು ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳು ಹೆಚ್ಚಿಸಿದ್ದವು. ಆದರೆ ಸುಪ್ರೀಂಕೋರ್ಟ್ ಇಂದು ಸಂಜೆಯೊಳಗಾಗಿ ಸರ್ಕಾರ ಬಹುಮತ ಯಾಚಿಸದಿದ್ದರೆ ಬುಧವಾರ ತನ್ನ ಮುಂದೆ ಬರುವಂತೆ ಪಕ್ಷೇತರ ಶಾಸಕರ ಅರ್ಜಿಗೆ ಪ್ರತಿಕ್ರಿಯೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಮ್ಮಿಶ್ರ ಸರ್ಕಾರ ವಿಶ್ವಾಸ ಮತ ಯಾಚಿಸುತ್ತದೋ? ಅಥವಾ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಹೇರುವ ಪರಿಸ್ಥಿತಿಯನ್ನು ನಿರ್ಮಿಸುತ್ತದೋ? ಎಂಬ ಕುತೂಹಲ ಶುರುವಾಗಿತ್ತು.

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಮಾತನಾಡಿದ ನಂತರ ರಾತ್ರಿ ವಿಶ್ವಾಸಮತವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ಧ್ವನಿಮತಕ್ಕೆ ಹಾಕಿದರು. ಧ್ವನಿ ಮತದ ನಂತರ ಪ್ರತ್ಯೇಕವಾಗಿ ಮತ ಎಣಿಕೆಯನ್ನು ಡಿವಿಷನ್ ಆಧಾರದ ಮೇಲೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಯಡಿಯೂರಪ್ಪರ ಕೋರಿಕೆಯ ಮೇರೆಗೆ ಆ ಪ್ರಕ್ರಿಯೆಯನ್ನು ಆರಂಭಿಸಿದರು.

ಮೊದಲು ಎರಡು ನಿಮಿಷಗಳ ಕಾಲದ ಬೆಲ್ ಹಾಕಿದ ಸ್ಪೀಕರ್ ನಂತರ ವಿಧಾನಸಭೆಯನ್ನು ಪ್ರವೇಶಿಸಲು ಇದ್ದ ಎಲ್ಲ ಬಾಗಿಲುಗಳನ್ನು ಬಂದ್ ಮಾಡಿಸಿ,ವಿಶ್ವಾಸ ಮತದ ಪರ ಇರುವ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿದರು. ಮೊದಲ ಸಾಲಿನಿಂದ ಹಿಡಿದು ಕೊನೆಯ 7ನೇ ಸಾಲಿನವರೆಗೆ ಮೊದಲು ಸದಸ್ಯರು ಎದ್ದು ನಿಲ್ಲುವಂತೆ ಹೇಳಿ ವಿಶ್ವಾಸ ಮತದ ಪರವಾಗಿ ಲೆಕ್ಕ ಹಾಕಿದಾಗ 99 ಮಂದಿ ಹಾಜರಿರುವುದು ಸ್ಪಷ್ಟವಾಯಿತು. ಆನಂತರ ವಿಶ್ವಾಸ ಮತದ ವಿರುದ್ಧ ಇರುವ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕಿದಾಗ 105 ಮಂದಿ ಇದ್ದರು. ಆನಂತರ ಸದನದಲ್ಲಿ ಹಾಜರಿದ್ದವರು ಒಟ್ಟು 204 ಮಂದಿ. ಈ ಪೈಕಿ ವಿಶ್ವಾಸ ಮತದ ಪರ 99 ಮಂದಿ ಶಾಸಕರು ಮತ ಚಲಾಯಿಸಿದ್ದಾರೆ. ವಿರುದ್ಧವಾಗಿ 105 ಮಂದಿ ಶಾಸಕರು ಮತ ಚಲಾಯಿಸಿದ್ದಾರೆ ಎಂದು ಸ್ಪೀಕರ್ ಕೆ.ಎಸ್.ರಮೇಶ್ ಕುಮಾರ್ ಘೋಷಿಸಿದರು.

ಆ ಮೂಲಕ ಸಮ್ಮಿಶ್ರ ಸರ್ಕಾರ ವಿದ್ಯುಕ್ತವಾಗಿ ಪತನವಾಯಿತಲ್ಲದೆ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಅಧಿಕಾರ ಸೂತ್ರ ಹಿಡಿಯುವುದು ನಿಕ್ಕಿಯಾಯಿತು. ಹೀಗೆ ಸರ್ಕಾರ ಪತನವಾಗುತ್ತಿದ್ದಂತೆಯೇ ಸಭಾಧ್ಯಕ್ಷರ ಎದುರಿನ ಬಾವಿಗೆ ಬಂದ ಬಿಜೆಪಿ ಸದಸ್ಯರು ವಿಜಯ ಸಂಕೇತ ತೋರಿ ವಿಜಯದ ಹರ್ಷ ಧ್ವನಿ ಮೊಳಗಿಸಿದರು.