ಮೈಸೂರು ಪೊಲೀಸರಿಗೆ ಆಯುಕ್ತರಿಂದ `ಜನಸ್ನೇಹಿ’ ಪಾಠ

ಮೈಸೂರು,ಡಿ.17(ಆರ್‍ಕೆ)- ಜನ ರೊಂದಿಗೆ ಉತ್ತಮ ಬಾಂಧವ್ಯವಿರಿಸಿ ಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ `ಜನಸ್ನೇಹಿ ಪೊಲೀಸ್’ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಿ ಎಂದು ನಗರ ಪೊಲೀಸ್ ಕಮೀಷ ನರ್ ಕೆ.ಟಿ.ಬಾಲಕೃಷ್ಣ ಅವರು ಮೈಸೂ ರಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಇಂದಿಲ್ಲಿ ಸಲಹೆ ನೀಡಿದರು.

ಮೈಸೂರಿನ ಲಲಿತ ಮಹಲ್ ರಸ್ತೆಯ ಲ್ಲಿರುವ ಪೊಲೀಸ್ ಭವನದ ಸಭಾಂ ಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜನ ಸ್ನೇಹಿ ಪೊಲೀಸ್ ಕುರಿತ ಕಾರ್ಯಾಗಾರ ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಪೊಲೀಸ್ ಠಾಣೆಗೆ ಬರುವ ನಾಗರಿಕರನ್ನು ಸ್ವಾಗತ ಡೆಸ್ಕ್‍ಗಳಲ್ಲಿ ಆತ್ಮೀ ಯವಾಗಿ ಬರಮಾಡಿಕೊಂಡು ಕೂರಿಸಿ ಅವರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದರೆ ಸಾಕು ಅವರ ಅರ್ಧ ಸಮಸ್ಯೆ ಬಗೆಹರಿಸಿದಂತೆ ಎಂದರು.

ದೂರು ಪಡೆದು ಸಂಬಂಧಪಟ್ಟ ಅಧಿ ಕಾರಿಗಳು ಕ್ರಮ ವಹಿಸಿ ಕಳುಹಿಸಿಕೊಟ್ಟರೆ ಜನರಿಗೆ ತಮ್ಮ ಕೆಲಸವಾದ ಬಗ್ಗೆ ತೃಪ್ತಿ ಮತ್ತು ಪೊಲೀಸರ ಬಗ್ಗೆ ಒಳ್ಳೆಯ ಅಭಿ ಪ್ರಾಯ ಮೂಡುತ್ತದೆ. ಪೊಲೀಸ್ ಠಾಣೆ ಗಳನ್ನು ಕೋಟೆಯಂತೆ ಬಿಂಬಿಸಿದರೆ ನೊಂದವರು ಠಾಣೆಗೆ ಮುಕ್ತವಾಗಿ ಬರು ವುದಿಲ್ಲ. ನಾವು ಹೇಗೆ ವರ್ತಿಸುತ್ತೇವೆ ಎಂಬುದರ ಮೇಲೆ ಜನರಿಗೆ ನಮ್ಮ ಮೇಲೆ ವಿಶ್ವಾಸ, ನಂಬಿಕೆ ಬರುತ್ತದೆ ಎಂದು ಕಮಿಷ ನರ್ ಅವರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀತಿಪಾಠ ಹೇಳಿಕೊಟ್ಟರು.

ಒಳ್ಳೆಯವರ ಜತೆ ಒಳ್ಳೆಯ ರೀತಿಯಲ್ಲೇ ನಡೆದುಕೊಳ್ಳಬೇಕು. ತಪ್ಪು ಮಾಡಿದವರು ಹಾಗೂ ಕಾನೂನು ಉಲ್ಲಂಘಿಸಿದವರಿಗೆ ಕಾನೂನು ರೀತ್ಯಾ ಚುರುಕು ಮುಟ್ಟಿಸಿ ಸರಿದಾರಿಗೆ ತರುವುದು ಜನಸ್ನೇಹಿ ಪೊಲೀಸರ ಪ್ರಮುಖ ಲಕ್ಷಣ ಎಂದು ಅವರು ಇದೇ ವೇಳೆ ನುಡಿದರು.

ಠಾಣೆ ಒಳಗೆ, ಹೊರಗೆ ಗಸ್ತು ಮಾಡು ವಾಗ ಮೊಹಲ್ಲಾದ ಜನರೊಂದಿಗೆ ಸಂಪರ್ಕ ವಿರಿಸಿಕೊಂಡರೆ ಅಪರಾಧಗಳು, ಅಪರಾಧಿಗಳ ಬಗ್ಗೆ ಮಾಹಿತಿ ಸಿಗುತ್ತದೆ. ಅಪರಾಧ ತಡೆ ಮತ್ತು ಪತ್ತೆಗೆ ನಿಮ್ಮ ಜನಸ್ನೇಹಿ ವರ್ತನೆ ಸಹಕಾರಿಯಾಗುತ್ತದೆ. ನೀವು ಪಾರದ ರ್ಶಕ ಹಾಗೂ ಕಾನೂನು ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದರೆ ನೀವು ಕೈಗೊಂಡ ಕ್ರಮದ ಬಗ್ಗೆ ಜನರಿಗೆ ವಿಶ್ವಾಸ ಮೂಡುತ್ತದೆ ಎಂದೂ ಕೆ.ಟಿ. ಬಾಲಕೃಷ್ಣ ಅವರು ಇದೇ ಸಂದರ್ಭ ನುಡಿದರು.

ಡಿಸಿಪಿಗಳಾದ ಡಾ.ಎ.ಎನ್. ಪ್ರಕಾಶ್ ಗೌಡ, ಬಿ.ಟಿ. ಕವಿತಾ, ಎಸಿಪಿಗಳಾದ ಶಶಿಧರ್, ಶಿವಶಂಕರ್, ಮರಿಯಪ್ಪ, ಇನ್ಸ್ ಪೆಕ್ಟರ್‍ಗಳಾದ ಎ. ಮಲ್ಲೇಶ್, ಸಿ. ಕಿರಣ್ ಕುಮಾರ್, ಪ್ರಸನ್ನಕುಮಾರ್, ಶೇಖರ್, ಬಸವರಾಜು, ಅರುಣ್, ಮುನಿಯಪ್ಪ, ಶ್ರೀನಿವಾಸ್, ಸೂರಜ್, ಬಿ.ಜಿ. ಪ್ರಕಾಶ್ ಸೇರಿದಂತೆ ಮೈಸೂರು ನಗರದ ಎಲ್ಲಾ ಠಾಣೆಗಳ ಇನ್ಸ್‍ಪೆಕ್ಟರ್‍ಗಳು, ಸಬ್ ಇನ್ಸ್ ಪೆಕ್ಟರ್‍ಗಳು, ರಿಸೆಪ್ಷನ್ ಡೆಸ್ಕ್ ಸಿಬ್ಬಂದಿ ಸಂಜೆಯವರೆಗೂ ನಡೆದ ಕಾರ್ಯಾಗಾರ ದಲ್ಲಿ ಪಾಲ್ಗೊಂಡಿದ್ದರು. ಜನರು ಠಾಣೆಗೆ ಬಂದಾಗ ರಿಸೆಪ್ಷನ್ ಡೆಸ್ಕ್ ಸಿಬ್ಬಂದಿ ನಡೆದು ಕೊಳ್ಳಬೇಕಾದ ವರ್ತನೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು.

ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ ಪೊಲೀಸರು ಒತ್ತಡಕ್ಕೆ ಮಣಿದಿಲ್ಲ
ಮೈಸೂರು,ಡಿ.17(ಆರ್‍ಕೆ)-ಶಾಸಕ ತನ್ವೀರ್ ಸೇಠ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಪ್ರಕರಣದ ತನಿಖೆಯಲ್ಲಿ ನಾವು ಯಾರ ಒತ್ತಡಕ್ಕೂ ಮಣಿದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ಇಂದಿಲ್ಲಿ ತಿಳಿಸಿದ್ದಾರೆ.

ಮೈಸೂರಿನ ಪೊಲೀಸ್ ಭವನದ ಬಳಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ಆ ಸಂಬಂಧ ಯಾರೂ ನಮಗೆ ಒತ್ತಡ ಹೇರಿಲ್ಲ. ನಾವು ಯಾರ ಒತ್ತಡಕ್ಕೂ ಮಣಿದಿಲ್ಲ. ವಿಶೇಷ ತನಿಖಾ ತಂಡದ ಅಧಿಕಾರಿಗಳು ನಿಯಮಾನುಸಾರ ತನಿಖೆ ಮುಂದುವರಿಸಿದ್ದಾರೆ ಎಂದರು.

ತನ್ವೀರ್ ಸೇಠ್ ಅವರ ಮೇಲಿನ ಹಲ್ಲೆ ಪ್ರಕರಣ ಸೂಕ್ಷ್ಮವಾದುದರಿಂದ ಹಾಗೂ ತನಿಖೆ ಪ್ರಗತಿ ಹಂತದಲ್ಲಿರುವ ಕಾರಣ ಮಾಧ್ಯಮಕ್ಕೆ ಬಹಿರಂಗಪಡಿಸುವುದು ಸಮಂಜಸವಲ್ಲ. ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಬೇಕಾಗಿರುವುದರಿಂದ ನಾವು ಈಗ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಆಯುಕ್ತರು ನುಡಿದರು.

ಪ್ರಮುಖ ಆರೋಪಿ ಸೇರಿದಂತೆ ಈವರೆಗೆ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ. ಹಲವು ಶಂಕಿತರನ್ನು ವಿಚಾರಣೆಗೊಳಪಡಿಸಿ ಸಮಗ್ರ ಮಾಹಿತಿ ಪಡೆದು ಸುಳಿವಿನ ಬೆನ್ನೇರಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇನ್ನೊಂದು ತಿಂಗಳೊಳಗೆ ತನಿಖೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಂತರ ನಾವೇ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡುತ್ತೇವೆ ಎಂದು ಅವರು ನುಡಿದರು.

ಹೊಸ ವರ್ಷಾಚರಣೆ ಸಂಭ್ರಮಿಸಿ, ಆದರೆ ಕಾನೂನು ಉಲ್ಲಂಘಿಸದಿರಿ  ಮೈಸೂರು ನಾಗರಿಕರಿಗೆ ಪೊಲೀಸ್ ಆಯುಕ್ತರ ಸಲಹೆ
ಮೈಸೂರು,ಡಿ.17(ಆರ್‍ಕೆ)-2020ರ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಿ, ಆದರೆ ಕಾನೂನು ಉಲ್ಲಂಘಿಸಿ ಕಷ್ಟಕ್ಕೆ ಸಿಲುಕಬೇಡಿ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅವರು ಮೈಸೂರು ನಾಗರಿಕರಿಗೆ ಸಲಹೆ ನೀಡಿದ್ದಾರೆ.

ಮೈಸೂರಿನ ಪೊಲೀಸ್ ಭವನದ ಬಳಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಹೊಸ ವರ್ಷಾಚರಣೆ ಸ್ವಾಗತಿಸಲು ಏರ್ಪಡಿಸುವ ಔತಣ ಕೂಟಗಳಲ್ಲಿ ಸೌಜನ್ಯದಿಂದ ವರ್ತಿಸಿ, ಬೇರೆಯವರಿಗೆ ತೊಂದರೆ ಆಗದಂತೆ ಸಂಭ್ರಮ ಪಡಲು ಅಡ್ಡಿಯಿಲ್ಲ ಎಂದರು.

ಹೋಟೆಲ್‍ಗಳು, ರೆಸ್ಟೋರೆಂಟ್‍ಗಳು, ಕ್ಲಬ್‍ಗಳಲ್ಲಿ ಅಂದು ರಾತ್ರಿ 12 ಗಂಟೆವರೆಗೆ ಪಾರ್ಟಿ ಮಾಡಲು ಅವಕಾಶವಿರುತ್ತದೆ. ಬಂದ್ ಮಾಡಿ ಹೋಗಲು ಮಧ್ಯರಾತ್ರಿ 1 ಗಂಟೆವರೆಗೆ ಎಲ್ಲರೂ ಜಾಗ ಖಾಲಿ ಮಾಡಬೇಕು. ಔತಣ ಕೂಟದ ಹೆಸರಲ್ಲಿ ಕುಡಿದು ವಾಹನ ಚಾಲನೆ ಮಾಡುವುದು, ಯುವತಿಯರು, ಮಹಿಳೆಯರಿಗೆ ಕೀಟಲೆ ಮಾಡುವುದು, ಅನಗತ್ಯ ಜಗಳ, ಗದ್ದಲ ಉಂಟುಮಾಡುವುದು ಕಂಡುಬಂದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಅಂದು ರಾತ್ರಿ ಎಲ್ಲೆಡೆ ಪೊಲೀಸರು ಪೆಟ್ರೋಲಿಂಗ್ ಮಾಡುತ್ತಿರುತ್ತಾರೆ. ಸಂಚಾರ ಅಥವಾ ಕಾನೂನು-ಸುವ್ಯವಸ್ಥೆಗೆ ಭಂಗ ಬಾರದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ. ಯುವ ಸಮೂಹ ನಿಯಮಾನುಸಾರ ಪಾರ್ಟಿ ಮುಗಿಸಿ ಶಾಂತಿಯುತವಾಗಿ ಮನೆಗೆ ಹಿಂದಿರುಗಬೇಕೆಂದೂ ಬಾಲಕೃಷ್ಣ ಅವರು ತಿಳಿಸಿದರು.

ಮೈಸೂರು ಡಿಸಿಪಿಯಾಗಿ ಡಾ.ಪ್ರಕಾಶ್‍ಗೌಡ ಅಧಿಕಾರ ಸ್ವೀಕಾರ
ಮೈಸೂರು,ಡಿ.17(ಆರ್‍ಕೆ)-ಮೈಸೂರು ನಗರ ಕಾನೂನು ಸುವ್ಯವಸ್ಥೆ ಡಿಸಿಪಿಯಾಗಿ ಡಾ.ಎ.ಎನ್.ಪ್ರಕಾಶ್‍ಗೌಡ ಅವರು ಸೋಮವಾರ ರಾತ್ರಿ ಅಧಿಕಾರ ವಹಿಸಿಕೊಂಡರು. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಡಿಸಿಪಿ ಯಾಗಿ ಮೈಸೂರಿಗೆ ವರ್ಗಾವಣೆಗೊಂಡಿದ್ದರಾದರೂ, ಹಾಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿಸಿಪಿ ಎಂ.ಮುತ್ತುರಾಜ್ ಅವರನ್ನೇ ಮುಂದುವರಿ ಸಲು ಸರ್ಕಾರ ಮತ್ತೊಂದು ಆದೇಶ ಹೊರಡಿಸಿದ್ದರಿಂದ ಪ್ರಕಾಶ್‍ಗೌಡರು, ಅದನ್ನು ಪ್ರಶ್ನಿಸಿ ಕೆಎಟಿ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕಾಶ್‍ಗೌಡರ ವರ್ಗಾವಣೆ ಆದೇಶವನ್ನು ಎತ್ತಿ ಹಿಡಿದು, ಮೂರು ದಿನಗಳ ಹಿಂದೆ ಆದೇಶಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಗೃಹ ಇಲಾಖೆ ಅವರನ್ನು ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಅಧಿಕಾರ ವಹಿಸಿಕೊಳ್ಳುವಂತೆ ಆದೇಶಿಸಿದೆ.

ಅದರಂತೆ ಸೋಮವಾರ ರಾತ್ರಿ 10.15 ಗಂಟೆ ವೇಳೆಗೆ ಡಾ. ಎ.ಎನ್. ಪ್ರಕಾಶ್‍ಗೌಡರು ಮೈಸೂರಿನ ನಜರ್‍ಬಾದ್‍ನಲ್ಲಿರುವ ತಮ್ಮ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.