ಹಾಸನ, ಜು.7- ರಾಜ್ಯದಲ್ಲಿ 2018ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳನ್ನು ಗಮನಿಸಿ ಸರ್ವೋಚ್ಛ ನ್ಯಾಯಾಲಯವು ರಸ್ತೆ ಸುರಕ್ಷತಾ ಸಮಿತಿಯನ್ನು ರಚಿಸಿದ್ದು, ಆ ಸಮಿತಿ ನೀಡಿರುವ ಶಿಫಾರಸುಗಳ ಮೇರೆಗೆ ಸರ್ಕಾರಿ ಸುತ್ತೋಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ಸಂಬಂಧ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮೋಟಾರು ವಾಹನಗಳ ಕಾಯ್ದೆ 1988ರ ಪರಿಚ್ಛೇದ 135ರಂತೆ ಗಂಭೀರ ಗಾಯಗಳು ಅಥವಾ ಮರಣ ಸಂಭವಿಸಿದರೆ ಆ ರಸ್ತೆ ಅಪಘಾತದ ಸ್ಥಳವನ್ನು ಲೋಕೋಪಯೋಗಿ, ಪೊಲೀಸ್ ಮತ್ತು ಸಾರಿಗೆ ಇಲಾಖೆ ಪ್ರತಿನಿಧಿಗಳನ್ನೊಳಗೊಂಡ ತಂಡವು ವೈಜ್ಞಾನಿಕವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ ನೀಡಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಸುರಕ್ಷಾ ಸಮಿತಿ ರಚಿಸಿ ಸರ್ಕಾರದಿಂದ ಗುರುತಿಸಿರುವ ಕಪ್ಪುಚುಕ್ಕೆ ಸ್ಥಳಗಳನ್ನು ವೈಜ್ಞಾನಿಕವಾಗಿ ತನಿಖೆ ಮಾಡುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ತಾಲೂಕುವಾರು ತನಿಖಾ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ತನಿಖಾ ತಂಡ ಗಂಭೀರ ಗಾಯ ಮತ್ತು ಮರಣಗಳು ನಡೆಯುವ ಪ್ರತಿ ರಸ್ತೆ ಅಪಘಾತವನ್ನು ವೈಜ್ಞಾನಿಕವಾಗಿ ತನಿಖೆ ನಡೆಸುವುದು. ರಸ್ತೆ ಅಪಘಾತವಾಗಿರುವ ಕಾರಣ ದೃಢಪಡಿಸಿ ಕಪ್ಪು ಚುಕ್ಕೆಯ ಸ್ಥಳಗಳ ಸರಿಪಡಿಸುವಿಕೆ ಮೊದಲಿನ ಹಾಗೂ ನಂತರದ ಛಾಯಾಚಿತ್ರ ದಾಖಲಿಸುವುದು, ಕಪ್ಪು ಚುಕ್ಕೆಗಳ ಸ್ಥಳಗಳನ್ನು ಸರಿಪಡಿಸಿದ ಬಳಿಕ ಅಪಘಾತಗಳ ಪ್ರಮಾಣ ಕಡಿಮೆಯಾದ ಮಾಹಿತಿ ಸಿದ್ಧಪಡಿಸಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗೆ ಸಲ್ಲಿಸುವುದು, ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಎಲ್ಲಾ ತಾಲೂಕು ಸಮಿತಿಗಳ ತನಿಖಾ ವರದಿ ಕ್ರೋಢೀಕರಿಸಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗೆ ಮಂಡಿಸಿ ನಿರ್ಣಯವನ್ನು ರಸ್ತೆ ಸುರಕ್ಷತಾ ಪ್ರಾಧಿಕಾರಕ್ಕೆ ಸಲ್ಲಿಸಬೇಕಿದೆ ಎಂದು ಸೂಚಿಸಿದರು. ಒಂದೊಮ್ಮೆ ತನಿಖಾ ಸಮಿತಿ ಸದಸ್ಯರು ವರ್ಗಾವಣೆಗೊಂಡರೆ ಆ ಸ್ಥಾನದಲ್ಲಿ ಪ್ರಭಾರ ಅಧಿಕಾರ ವಹಿಸಿಕೊಂಡವರು ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ತಿಳಿಸಿದರು.