ಉದ್ಯೋಗ ಖಾತ್ರಿ ಕೂಲಿಕಾರರಿಗೆ ವಂಚನೆ ಖಂಡಿಸಿ ಧರಣಿ

ಮದ್ದೂರು:  ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ ಕೆಲಸ ಮಾಡಿರುವ ಕೂಲಿಕಾರರಿಗೆ ಕೂಲಿ ನೀಡದೇ ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಆಬಲವಾಡಿ ಗ್ರಾಪಂ ಅಧಿಕಾರಿಗಳ ವಿರುದ್ಧ ಕೊಪ್ಪ ಹೋಬಳಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಆಬಲವಾಡಿ, ಅವ್ವೇರಹಳ್ಳಿ, ನಂಬಿನಾಯಕನಹಳ್ಳಿ ಗ್ರಾಮಸ್ಥರು ಧರಣಿ ನಡೆಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಜಯ ಕರ್ನಾಟಕ ಸಂಘಟನೆ ಕೊಪ್ಪ ಹೋಬಳಿ ಅಧ್ಯಕ್ಷ ಮೂಗೂರೇಗೌಡ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಸರಿಯಾಗಿ ಕೆಲಸ ನಿರ್ವಹಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಶೌಚಾಲಯ, ಕೊಟ್ಟಿಗೆ, ಕೃಷಿ ಹೊಂಡ, ಕಾಂಕ್ರಿಟ್ ರಸ್ತೆಗಳಲ್ಲಿ ಕೂಲಿ ಮಾಡಿರುವ ಕೂಲಿಕಾರರಿಗೆ ಹಣ ನೀಡದೇ ಕಾಲಹರಣ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಂವಿಸಿದ್ದ ಪಿಎಸ್‍ಐ ಮಂಜೇಗೌಡ ಧರಣಿ ನಿರತರನ್ನು ಮನವೊಲಿಸಿ ಈ ಧರಣಿಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಡಲಾಯಿತು.

ಪ್ರತಿಭಠನೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಬಿ.ಶಿವಮಾದು, ಜಯ ಕರ್ನಾಟಕ ಸಂಘಟನೆ ವಲಯ ಕಾರ್ಯದರ್ಶಿ ಮಹಮದ್ ಇಲಿಯಾಜ್, ಮುಖಂಡರಾದ ಮಹಮದ್ ಜಬಿವುಲ್ಲಾ, ಆಬಲವಾಡಿ ಅನಿಲ್‍ಕುಮಾರ್, ಶ್ರೀಕಾಂತ, ನಂದೀಶ, ಗ್ರಾಮದ ಮುಖಂಡರಾದ ಸುರೇಶ್, ಗೋವಿಂದಯ್ಯ, ತಿಮ್ಮೇಶ್, ಜಗದೀಶ್, ಶ್ರೀಧರ, ಸಂಜಯ ಇತರರಿದ್ದರು.