ಸರ್ಕಾರದ ಸಹಾಯ ಧನ ಸಂಬಂಧ ಆಟೋ, ಟ್ಯಾಕ್ಸಿ ಚಾಲಕರಲ್ಲಿ ಗೊಂದಲ

ಆನ್‍ಲೈನ್ ಅರ್ಜಿ ಸಲ್ಲಿಕೆಗೆ ಬೆಳಕು ಸಂಸ್ಥೆ ನೆರವು

ಮೈಸೂರು: ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸರ್ಕಾರ 5 ಸಾವಿರ ರೂ. ಸಹಾಯ ಧನ ಘೋಷಿಸಿದೆ. ಆದರೆ ಅದನ್ನು ಪಡೆಯು ವುದು ಹೇಗೆ ಎಂಬುದು ಬಹಳಷ್ಟು ಚಾಲಕರಿಗೆ ತಿಳಿದಿಲ್ಲ.

ಹಾಗಾಗಿ ಮೈಸೂರಿನ ಬೆಳಕು ಸಂಸ್ಥೆ ದಿನದಲ್ಲಿ ಮೂರು ಕಡೆ ತಾತ್ಕಾಲಿಕ ಸೇವಾ ಕೇಂದ್ರ ತೆರೆದು, ಸರ್ಕಾರ ನೀಡುವ ಸಹಾಯ ಧನಕ್ಕೆ ಅರ್ಜಿ ಸಲ್ಲಿಸಲು ಚಾಲಕರಿಗೆ ನೆರವಾಗಿದೆ. ಗನ್‍ಹೌಸ್ ವೃತ್ತದ ಬಳಿ ಈ ಕಾರ್ಯಕ್ಕೆ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಶನಿವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೊರೊನಾ ಹರಡದಂತೆ ದೇಶ ದಲ್ಲಿ ಲಾಕ್‍ಡೌನ್ ಜಾರಿಗೊಳಿಸಲಾಯಿತು. ಸದ್ಯ 4ನೇ ಹಂತದ ಲಾಕ್‍ಡೌನ್ ಜಾರಿಯಲ್ಲಿದ್ದರೂ ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ಸಿಕ್ಕಿದೆ. ಆದರೂ 2 ತಿಂಗಳಿಂದ ದುಡಿಮೆಯಿಲ್ಲದ ಕಾರಣ ಚಾಲಕರು ತುಂಬಾ ಕಷ್ಟದಲ್ಲಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ 5 ಸಾವಿರ ರೂ. ಸಹಾಯ ಧನ ಘೋಷಣೆ ಮಾಡಿದ್ದು, ಅರ್ಜಿ ಸಲ್ಲಿಕೆಗೆ ಆನ್‍ಲೈನ್ ಲಿಂಕ್ ನೀಡಲಾಗಿದೆ. ಆದರೆ ಬಹುತೇಕ ಚಾಲಕರಿಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ಅಂತಹವರಿಗೆ ಬೆಳಕು ಸಂಸ್ಥೆ ಸಹಾಯ ಮಾಡಲು ಮುಂದಾ ಗಿರುವುದು ಶ್ಲಾಘನೀಯ ಎಂದರು.

ಬೆಳಕು ಸಂಸ್ಥೆಯ ಸಂಸ್ಥಾಪಕ ಕೆ.ಎಂ. ನಿಶಾಂತ್ ಮಾತನಾಡಿ, ಸಹಾಯ ಧನಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಅನೇಕ ಚಾಲಕರಲ್ಲಿ ಗೊಂದಲವಿದೆ. ಕೆಲವು ಕಂಪ್ಯೂಟರ್ ಸೆಂಟರ್‍ಗಳಲ್ಲಿ ಅರ್ಜಿ ಸಲ್ಲಿಕೆಗೆ ಹೆಚ್ಚು ಹಣ ಪಡೆಯುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಚಾಲಕರಲ್ಲಿ ಹಣವೆಲ್ಲಿದೆ?. ಚಾಲಕರ ಪರಿಪಾಟಲು ಗಮನಿಸಿ, ಉಚಿತ ಸೇವಾ ಕೇಂದ್ರದ ಮೂಲಕ ಅವರಿಗೆ ಸಹಾಯ ಮಾಡಲು ನಮ್ಮ ಸಂಸ್ಥೆ ಮುಂದಾಗಿದೆ. ಮುಂದಿನ 10 ದಿನಗಳ ಕಾಲ ನಗರದ ಪ್ರಮುಖ ವೃತ್ತಗಳಲ್ಲಿ ಸೇವಾ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಚಾಲಕರ ದಾಖಲೆ, ಮಾಹಿತಿ ಪಡೆದು ಸಂಸ್ಥೆಯ ಸ್ವಯಂ ಸೇವಕರೇ ಅರ್ಜಿ ಸಲ್ಲಿಕೆ ಮಾಡುತ್ತಾರೆ. ಮೊದಲ ದಿನವೇ 60ಕ್ಕೂ ಹೆಚ್ಚು ಚಾಲಕರು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.

ಸಂಸ್ಥೆಯ ಸಂಚಾಲಕ ಎಂ.ಎನ್.ಧನುಷ್, ಆಟೋ ಚಾಲಕರ ಸಂಘದ ಅಧ್ಯಕ್ಷ ನಂಜುಂಡಸ್ವಾಮಿ, ಮುಖಂಡರಾದ ಪ್ರದೀಪ್ ಕುಮಾರ್, ಟಿ.ಪಿ.ಮಧು, ಎಂ.ಕೆ.ದೀಪಕ್, ಪ್ರವೀಣ್, ಸುದ ರ್ಶನ್, ಅಮೃತೇಶ್, ಚೇತನ್, ಸಂತೋಷ್, ಪ್ರಜ್ವಲ್ ಮತ್ತಿತ ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.