ಮಡಿಕೇರಿ: ಉತ್ತರ ಪ್ರದೇಶದಲ್ಲಿ ಜನವರಿ 30ರಂದು ಮಹಾತ್ಮ ಗಾಂಧಿ ಅವರ ಹತೈ ಘಟನೆಯನ್ನು ಮರುಸೃಷ್ಟಿಸಿ, ನಾಥುರಾಮ್ ಗೋಡ್ಸೆಯ ಪರ ಘೋಷಣೆ ಕೂಗಿದ ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮತ್ತು ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಪಕ್ಷ ಮುಖಂಡರು ಮತ್ತು ಕಾರ್ಯಕರ್ತರು ಹಿಂದೂ ಮಹಾ ಸಭಾವನ್ನು ನಿಷೇಧಿಸುವಂತೆ ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರುಗಳು ಪರೋಕ್ಷವಾಗಿ ಹಿಂದೂ ಮಹಾಸಭಾಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಅವರ ವಿರುದ್ಧವೂ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಗೆಡವಿದರು. ಬಿಜೆಪಿಯ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಕೈ ಕಾರ್ಯಕರ್ತರು, ಬಿಜೆಪಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಂವಿಧಾನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿದರಲ್ಲದೆ, ಹಿಂದೂ ಮಹಾ ಸಭಾದ ಪ್ರ.ಕಾ. ಪೂಜಾ ಶಕುನ್ ಪಾಂಡೆ ಮತ್ತು ಆ ಸ್ಥಳದಲ್ಲಿ ಹಾಜರಿದ್ದ ಕಾರ್ಯಕರ್ತರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಮುಖಂಡ ಟಿ.ಪಿ.ರಮೇಶ್, ಸ್ವಾತಂತ್ರ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿ ದೇಶಕ್ಕೆ ಸ್ವತಂತ್ರ ತಂದು ಕೊಟ್ಟ ಮಹಾತ್ಮ ಗಾಂಧಿ ಅವರನ್ನು ಹತೈಗೈದ ಘಟನೆ ಯನ್ನು ದೇಶ ಇಂದಿಗೂ ಮರೆತಿಲ್ಲ. ಇಂದು ಸ್ವಾತಂತ್ರ ಅನುಭವಿಸುತ್ತಿರುವ ಕೆಲವು ದೇಶದ್ರೋಹಿಗಳು ಗಾಂಧಿಜಿಯ ಪ್ರತಿ ರೂಪಕ್ಕೆ ಗುಂಡಿಕ್ಕುವ ಮೂಲಕ ಮಹಾತ್ಮ ಗಾಂಧಿಗೆ ಅಪಮಾನ ಮಾಡಿದ್ದಾರೆ. ಉತ್ತರ ಪ್ರದೇಶ ಸರಕಾರ ಕೂಡ ಹಿಂದೂ ಮಹಾಸಭಾದ ಬೆಂಬಲಕ್ಕೆ ನಿಂತಿರುವುದು ದುರಂತ ಎಂದು ವ್ಯಾಖ್ಯಾನಿಸಿದರು. ಉತ್ತರ ಪ್ರದೇಶ ಪೊಲೀಸರು ಘಟನೆ ನಡೆದ ಬಳಿಕ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಯಾರನ್ನು ಕೂಡ ಇಲ್ಲಿಯವರೆಗೆ ಬಂಧಿಸಿಲ್ಲ. ತಕ್ಷಣವೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದರೆ ದೇಶದಾದ್ಯಂತ ಉಗ್ರ ಪ್ರತಿಭಟನೆ ನಡೆಸ ಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆ ಸಂದರ್ಭ ಮಡಿಕೇರಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಸದಸ್ಯರಾದ ಪ್ರಕಾಶ್ ಆಚಾರ್ಯ, ಜುಲೇಕಾವಿ, ಚುಮ್ಮಿ ದೇವಯ್ಯ, ಪ್ರಮುಖರಾದ ಸುರಯ್ಯ ಅಬ್ರಾರ್, ವಿ.ಪಿ. ಸುರೇಶ್, ಗಿಲ್ಬರ್ಟ್, ಹನೀಫ್, ತೆನ್ನೀರಾ ಮೈನಾ ಮತ್ತಿತರರು ಹಾಜರಿದ್ದರು.