ಜಯಪುರದಲ್ಲಿ 70 ವೀರಗಲ್ಲು, ಮಾಸ್ತಿಗಲ್ಲುಗಳ ಸಂರಕ್ಷಣೆ

ಬೇಲಿಯೊಳಗೆ ಸೇರಿಹೋಗಿದ್ದ ಹೊಯ್ಸಳರ ಕಾಲದ ಸ್ಮಾರಕಗಳನ್ನು ಬೆಳಕಿಗೆ ತಂದ ಎನ್‍ಎಸ್‍ಎಸ್ ವಿದ್ಯಾರ್ಥಿಗಳು

ಮೈಸೂರು, ಫೆ.2- ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಿರುವ ಸತಿ ಸಹಗಮನ, ಯುದ್ಧದಲ್ಲಿ ವೀರ ಮರಣವನ್ನಪ್ಪಿದ ವೀರರ ಚಿತ್ರಣ, ಗಜಕಾಳಗದಲ್ಲಿ ಸೆಣ ಸಾಡಿದವರ 70ಕ್ಕೂ ಹೆಚ್ಚು ವೀರಗಲ್ಲು, ಮಾಸ್ತಿ ಗಲ್ಲು ಗಳನ್ನು ಎನ್‍ಎಸ್‍ಎಸ್ ವಿದ್ಯಾರ್ಥಿಗಳು `ಕತ್ತಲೆ’ ಯಿಂದ ಬೆಳಕಿಗೆ ತಂದಿದ್ದಾರೆ.

ಮೈಸೂರಿನ ಕುವೆಂಪು ನಗರದ ಪ್ರಥಮ ದರ್ಜೆ ಕಾಲೇಜಿನ 100 ವಿದ್ಯಾರ್ಥಿಗಳು ಮೈಸೂರು ತಾಲೂಕು ಜಯಪುರದಲ್ಲಿ ಜ.28ರಿಂದ ಫೆ.3ರವರೆಗೆ ರಾಷ್ಟ್ರೀಯ ಸೇವಾ (ಎನ್‍ಎಸ್‍ಎಸ್) ಶಿಬಿರ ಹಮ್ಮಿಕೊಂಡಿದ್ದು, ಗ್ರಾಮದ ಗುಜ್ಜಾಲಮ್ಮ ದೇವಾಲಯ ಸುತ್ತ್ತ ಬೇಲಿ ಯೊಳಗೆ ಹುದುಗಿಹೋಗಿದ್ದ ವೀರಗಲ್ಲು, ಮಾಸ್ತಿಗಲ್ಲು ಗಳನ್ನು ಮೇಲೆತ್ತಿ ದೇವಾಲಯದ ಕಾಂಪೌಂಡ್ ಸುತ್ತ ಪ್ರತಿಷ್ಠಾಪಿಸಿ ಇತಿಹಾಸದ ಹೆಜ್ಜೆ ಗುರುತನ್ನು ಸಂರಕ್ಷಿಸಿ ದ್ದಾರೆ. ಈ ಕಾರ್ಯಕ್ಕೆ ಗ್ರಾಮಸ್ಥರೂ ಕೈಜೋಡಿಸಿದ್ದಾರೆ.

10ರಿಂದ 14ನೇ ಶತಮಾನದಲ್ಲಿ, ಹೊಯ್ಸಳರು ಹಾಗೂ ವಿಜಯನಗರ, ಮೈಸೂರು ರಾಜರ ಆಳ್ವಿಕೆ ಸಮಯದಲ್ಲಿ ಕೆತ್ತನೆ ಮಾಡಿರುವ ವೀರಗಲ್ಲುಗಳನ್ನು ದೇವಾಲಯ ಆವರಣದಲ್ಲಿ ಈ ಹಿಂದೆಯೇ ನೆಡಲಾಗಿತ್ತು. ಕ್ರಮಬದ್ಧ ವಾಗಿಲ್ಲದ ಕಾರಣ ಹಲವು ವೀರಗಲ್ಲುಗಳು ಅರ್ಧದಷ್ಟು ಮಣ್ಣಿನಿಂದ ಮುಚ್ಚಿಹೋಗಿದ್ದವು. ಕೆಲ ವೀರಗಲ್ಲುಗಳು ಬೇಲಿಯೊಳಗೆ ಮರೆಯಾಗಿದ್ದವು. 2014-15ರಲ್ಲೂ ಇದೇ ಕಾಲೇಜಿನ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಶಿಬಿರ ನಡೆಸಿದಾಗ ಈ ವೀರಗಲ್ಲುಗಳನ್ನು ಸ್ವಚ್ಛಗೊಳಿಸಿದ್ದರು.

ಪ್ರಮುಖ ವೀರಗಲ್ಲು: ಇತಿಹಾಸ ತಜ್ಞ ಪ್ರೊ.ರಂಗರಾಜು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಈಗ ಸಂರಕ್ಷಿ ಸಿದ ವೀರಗಲ್ಲು, ಮಾಸ್ತಿಗಲ್ಲು ಮುಖ್ಯವಾದವು. ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಮಹಾರಾಜರ ಕಾಲ ದಲ್ಲಿ ಯುದ್ಧದಲ್ಲಿ ಮಡಿದ ವೀರರನ್ನು ನೆನಪಿಸುವ ಈ ವೀರಗಲ್ಲುಗಳನ್ನು ಸೋಪುಗಲ್ಲಿನಲ್ಲಿ ಕೆತ್ತಲಾಗಿದೆ. 70 ವೀರಗಲ್ಲುಗಳಲ್ಲಿ ಹೊಯ್ಸಳ ಕಾಲದವೇ ಹೆಚ್ಚಿವೆ. ಇವನ್ನು ಸಂರಕ್ಷಿಸಿ ಪೂರ್ವಾಭಿಮುಖವಾಗಿ ಜೋಡಿಸ ಲಾಗುತ್ತಿದೆ. ಗ್ರಾಮಸ್ಥರಿಗೆ ವೀರಗಲ್ಲುಗಳ ಬಗ್ಗೆ ಅರಿವು ಮೂಡಿಸಿ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುವಂತೆ ಮನವಿ ಮಾಡಲಾಗಿದೆ ಎಂದರು. ಯುದ್ಧದಲ್ಲಿ ಮಡಿದ ವೀರಪತಿ ಯೊಂದಿಗೆ ಸತಿಯೂ ಚಿತೆಯೇರಿದ್ದನ್ನು ನೆನಪಿಸುವ ಕೆತ್ತನೆ, ಆನೆಯೊಂದಿಗೆ ವೀರಯೋಧ ಕಾದಾಟಕ್ಕಿಳಿದಿರುವ ಚಿತ್ರಣ ಇಲ್ಲಿದೆ. ಇವನ್ನು ಗಮನಿಸಿದರೆ ಹೊಯ್ಸಳರ ಕಾಲದಲ್ಲಿ ಜಯಪುರದಲ್ಲಿ ಹೆಚ್ಚಿನ ಸಂಖ್ಯೆಯ ವೀರರು ಇದ್ದರೆಂದು ತಿಳಿಯುತ್ತದೆ. ಆದರೆ ಇತಿಹಾಸ ಸಾರುವ ಒಂದಾದರೂ ಶಿಲಾಶಾಸನ ಸಿಕ್ಕಿಲ್ಲ ಎಂದರು.

ಸಿಮೆಂಟಿನ ಲೇಪನ: ಕಾಲೇಜಿನ ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಹಾಗೂ ಎನ್‍ಎಸ್‍ಎಸ್ ಅಧಿಕಾರಿ ಎಸ್.ಜಿ.ರಾಮದಾಸ್ ರೆಡ್ಡಿ ಮಾತನಾಡಿ, ಪ್ರಾಂಶುಪಾಲ ರಾದ ರಾಗಿಣಿ ಅವರ ಮಾರ್ಗದರ್ಶನದಲ್ಲಿ ಉಪನ್ಯಾಸಕ ಬಸವರಾಜು ಅವರ ಸಹಕಾರದಲ್ಲಿ ಕಾಲೇಜಿನ ಎನ್ ಎಸ್‍ಎಸ್ ಘಟಕದಿಂದ ಪ್ರತಿ ವರ್ಷ ಐತಿಹಾಸಿಕ ಹಿನ್ನೆಲೆಯ ಗ್ರಾಮಗಳಲ್ಲಿಯೇ ಶಿಬಿರ ನಡೆಸಲಾಗು ತ್ತದೆ. ಜಯಪುರದಲ್ಲಿ ಮಣ್ಣಿನಲ್ಲಿ ಭಾಗಶಃ ಮುಚ್ಚಿಹೋಗಿದ್ದ ವೀರಗಲ್ಲುಗಳನ್ನು ಮೇಲೆತ್ತಲಾಗಿದೆ. ಅವುಗಳಲ್ಲಿ ಪ್ರಮುಖ ವಾಗಿ ಕಡಲ್ಗಳ್ಳರ ಶಿಲ್ಪಗಳು, ಮಾಸ್ತಿಕಲ್ಲು, ಪೆನ್‍ಬೈಲು ಶಿಲ್ಪಗಳು, ಆನೆಬೇಟೆ ವೀರಗಲ್ಲು, ತೆಂಗಿನಮರದ ಕೆಳಗೆ ನಿಂತಿದ್ದ ವೀರಮರಣ ಹೊಂದಿದವರ ವೀರಗಲ್ಲು ಸಿಕ್ಕಿರುವುದು ವಿಶೇಷ. 2014-15ರ ಶಿಬಿರದಲ್ಲಿ ಈ ವೀರಗಲ್ಲುಗಳ ಸುತ್ತಲ ಜಾಗ ಸ್ವಚ್ಛಗೊಳಿಸಿದ್ದೆವು. ಇತಿಹಾಸದ ಹೆಗ್ಗುರುತಾದ ಈ ವೀರಗಲ್ಲುಗಳನ್ನು ರಕ್ಷಿಸಲೆಂದೇ ದೇವಾಲಯದ ಸುತ್ತ ಸಾಲಾಗಿ ಜೋಡಿಸಿ ಸಿಮೆಂಟ್ ಲೇಪನ ಮಾಡಿ ಶಾಶ್ವತವಾದ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ತಾಮ್ರದ ಹಾಳೆ ಪತ್ತೆ
ಗ್ರಾಮದಲ್ಲಿ 20 ವರ್ಷಗಳ ಹಿಂದೆ ಕೋಣಪ್ಪ ದೇವಾಲಯ ಕಟ್ಟಲು ಪಾಯ ತೋಡುತ್ತಿ ದ್ದಾಗ ತಾಮ್ರ ಪತ್ರ ಸಿಕ್ಕಿದೆ. ಕೋಣಪ್ಪ ಹಾಗೂ ಕೆಂಗಲಮ್ಮ ದೇವಾಲಯದ ಬಲಭಾಗ ದಾರ ಸುತ್ತಿದ್ದ ಹೊಸಗುಂಬೆ (ಕುಡಿಕೆ)ಯಲ್ಲಿ ಪಾಯ ತೋಡು ವಾಗ ಇದು ಕಂಡು ಬಂದಿತ್ತು. ಅದರಲ್ಲಿ ತಾಮ್ರದ ಪಟೋಡ, ಬಳೆ, ಆನೆ ಮುದ್ರೆ ಇರುವ ಹಾಗೂ ಬರವಣಿಗೆಯುಳ್ಳ ತಾಮ್ರದ ಹಾಳೆಗಳಿದ್ದವು. ಅವನ್ನು ದೇವಾಲಯದಲ್ಲಿಟ್ಟು ಪೂಜಿಸುತ್ತಿದ್ದೇವೆ ಎಂದು ಚಿಕ್ಕ ನಾಗ ನಾಯಕ ವಿವರಿಸಿದರು.

ಎಂ.ಟಿ.ಯೋಗೇಶ್ ಕುಮಾರ್