ಕೊರೊನಾ: ಭಯ ಅನಗತ್ಯ, ಮುನ್ನೆಚ್ಚರಿಕೆ ಅತ್ಯಗತ್ಯ

ಮೈಸೂರು, ಮಾ.13(ಆರ್‍ಕೆಬಿ)- ವಿಶ್ವಾ ದ್ಯಂತ ಜನರನ್ನು ತಲ್ಲಣಗೊಳಿಸಿರುವ ಕೋವಿದ್-19 (ಕೊರೊನಾ ವೈರಸ್) ಬಗ್ಗೆ ಭಯ ಪಡಬೇಕಾಗಿಲ್ಲ. ಆದರೆ ಮುನ್ನೆಚ್ಚ ರಿಕೆ ಅಗತ್ಯ ಎಂದು ಮೈಸೂರು ಮೆಡಿಕಲ್ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ (ಮಾ) ಮತ್ತು ಮೈಸೂರು ಆಸ್ಪತ್ರೆಗಳು, ನರ್ಸಿಂಗ್ ಹೋಂ, ಡಯಾಗ್ನಸ್ಟಿಕ್ ಮತ್ತು ಕ್ಲಿನಿಕ್‍ಗಳ ಸಂಘ (ಮಹಾನ್) ತಿಳಿಸಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವೈದ್ಯರು ಕೊರೊನಾ ವೈರಸ್ ಕುರಿತು ಮಾಹಿತಿ ನೀಡಿದರು. ಮಹಾನ್ ಅಧ್ಯಕ್ಷ ಡಾ.ಕೆ. ಜಾವಿದ್ ನಯೀಮ್ ಮಾತನಾಡಿ, ಭಾರತ ದಲ್ಲಿ ಹೆಚ್ಚಿನ ತಾಪಮಾನವಿರುವುದರಿಂದ ಇಲ್ಲಿ ವೈರಸ್ ಹರಡುವುದಿಲ್ಲ ಎಂದು ಅಸಡ್ಡೆ ತೋರಬೇಡಿ. ಸ್ವೀಡನ್, ಆಸ್ಟ್ರೇಲಿಯಾ, ಇರಾನ್‍ನಲ್ಲಿ ತಾಪಮಾನ ಹೆಚ್ಚಾಗಿದ್ದರೂ ಕೊರೊನಾ ವ್ಯಾಪಿಸಿದೆ. ಎಷ್ಟೇ ತಾಪಮಾನ ವಿದ್ದರೂ ಕೊರೊನಾ ಹರಡುತ್ತದೆ. ಸುಳ್ಳು ಸುದ್ದಿಗೆ ಕಿವಿಗೊಡದೇ ಸಾರ್ವಜನಿಕರು ಮುಂಜಾ ಗ್ರತೆ ವಹಿಸುವಂತೆ ಮನವಿ ಮಾಡಿದರು.

ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಮಹಾಮಾರಿ ಕೊರೊನಾ ಮನುಕುಲಕ್ಕೆ ಅಪಾಯಕಾರಿ ಎಂದು ಎಲೆಕ್ಟ್ರಾನಿಕ್ ಹಾಗೂ ಸಾಮಾಜಿಕ ಮಾಧ್ಯಮಗಳು ಬಿಂಬಿಸುತ್ತಿವೆ. ಕೊರೊನಾ ಮರಣ ದರ ಶೇ.3 ಮಾತ್ರ. ಹಾಗಾಗಿ ಭಯ ಬೇಡ, ಗೃಹ ಬಂಧನದಲ್ಲಿರುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.

ಭಾರತಕ್ಕೆ ಕೊರೊನಾ ಹೊಸದೇನಲ್ಲ. ಭಾರತದಲ್ಲಿ 200 ಬಗೆಯ ಕೊರೊನಾ ವೈರಸ್‍ಗಳಿವೆ. ಆದರೆ ಚೀನಾದಿಂದ ಈಗ ಹರಡಿರುವ ಕೊರೊನಾ ಮಾತ್ರ ಅಪಾಯ ಕಾರಿ. ಮಕ್ಕಳು, ವೃದ್ಧರು, ಮಧುಮೇಹಿ ಗಳು, ಕ್ಯಾನ್ಸರ್ ನಿರೋಧಕ ಔಷಧಿ ಸೇವಿ ಸುತ್ತಿರುವವರಿಗೆ ಹೆಚ್ಚಿನ ಅಪಾಯ ತರುವ ಸಾಧ್ಯತೆ ಇರುವುದರಿಂದ ಹೆಚ್ಚು ಜಾಗರೂಕ ರಾಗಿರಬೇಕು. ಜ್ವರ, ಕೆಮ್ಮು, ನೆಗಡಿ, ಗಂಟಲು ನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡಲ್ಲಿ ಕೂಡಲೇ ತಪಾಸಣೆಗೆ ಒಳಗಾಗಬೇಕೆಂದು ಸಲಹೆ ನೀಡಿದರು.

`ಮಹಾನ್’ ಕಾರ್ಯದರ್ಶಿ ಹೆಚ್.ಆರ್. ಅಭಿಜಿತ್, ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ದೀಪು ಚೆನ್ನಪ್ಪ, `ಮಾ’ ಅಧ್ಯಕ್ಷ ಡಾ.ಪ್ರಸನ್ನಶಂಕರ್, ಡಾ. ಮುದಾಸ್ಸಿರ್ ಖಾನ್, ಡಾ.ಎನ್.ವಿಜಯ ಚಲುವರಾಜು ಮತ್ತಿತರಿದ್ದರು.