ಕೊರೊನಾ ಲಾಕ್ ಡೌನ್ ಹಿನ್ನಲೆ: ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ

ಮಂಡ್ಯ: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ‌ ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ ರೋಗ ಹರಡುವುದನ್ನು‌ ತಡೆಯಲು ಸಹಕರಿಸಿ ಎಂದು ಬೂದನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಟಿ.ಆಶಾ ಮನವಿ ಮಾಡಿದರು.
ತಾಲ್ಲೂಕಿನ ಹಳೇ ಬೂದನೂರು ಗ್ರಾಪಂ‌ ಕಚೇರಿ ಸಭಾಂಗಣದಲ್ಲಿ ನಡೆದ ಕೊರೊನಾ ಕಾರ್ಯಪಡೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಪಂ ಅಲ್ಲದೆ ವ್ಯಾಪ್ತಿಯ ಗ್ರಾಮಗಳಲ್ಲಿ‌ ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿದೆ ಎಂದರು.
ಗ್ರಾಮದ ಅಂಗಡಿ ಮುಗ್ಗಟ್ಟುಗಳು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಬೇಕು.‌ ಸೂಚಿಸಿದ ಸಮಯ ಬಿಟ್ಟು ಅಂಗಡಿ ತೆರೆದರೆ 10 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮ ವ್ಯಾಪ್ತಿಯ ಹಾಲಿನ‌ಡೈರಿ, ಸೂಸೈಟಿ ಹಾಗೂ ಅಂಗಡಿಗಳು ಕಡ್ಡಾಯವಾಗಿ ಸಾಮಾಜಿಕ‌ ಅಂತರವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಎಚ್ಚರಿಸಿದರು.ಇದಕ್ಕೂ ಮುನ್ನಾ ಗ್ರಾಮದ ಸಾರ್ವಜನಿಕ‌ ಸ್ಥಳಗಳಲ್ಲಿ‌ ಜಾಗೃತಿ ಜಾಥ ನಡೆಸಲಾಯಿತು.

ಸಭೆಯಲ್ಲಿ‌ ಪಿಡಿಒ ವಿನಯ್ ಕುಮಾರ್, ವೈದ್ಯಾಧಿಕಾರಿ ಉಷಾರಾಣಿ ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಸದಸ್ಯರು ಹಾಜರಿದ್ದರು.