ಶಾಲಾ-ಕಾಲೇಜಿನಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸದಂತೆ ಸೂಚನೆ

ಹನೂರು, ಆ.23(ಸೋಮು)- ಶಾಲಾ- ಕಾಲೇಜುಗಳಲ್ಲಿ ಸರ್ಕಾರ ನೀಡಿರುವ ಮಾರ್ಗಸೂಚಿ ಉಲ್ಲಂಘನೆಯಾಗದ ರೀತಿಯಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಶಾಸಕ ಆರ್.ನರೇಂದ್ರ ಸೂಚಿಸಿದರು.

ಸೋಮವಾರದಿಂದ 9, 10 ಮತ್ತು ಪಿಯುಸಿ ಭೌತಿಕ ತರಗತಿಗಳು ಪ್ರಾರಂಭವಾದ ಹಿನ್ನೆಲೆ ಪಟ್ಟಣದ ಜಿ.ವಿ.ಗೌಡ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಗಳಿಗೆ ಶಾಸಕ ನರೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋವಿಡ್ ನಿಯಮಾವಳಿ ಪಾಲನೆ ಸಂಬಂಧ ಶಾಲೆಯ ಮುಖ್ಯಶಿಕ್ಷಕ ನಿಂಗರಾಜು ಅವರಿಂದ ಮಾಹಿತಿ ಪಡೆದರು. ಬಳಿಕ ತರಗತಿಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡುವಂತೆ ತಿಳಿ ಹೇಳಿದರು. ಇದೇ ವೇಳೆ ಮುಖ್ಯ ಶಿಕ್ಷಕ ನಿಂಗರಾಜು ಅವರಿಂದ ದಾಖಲಾತಿ, ಹಾಜರಾತಿ ಬಗ್ಗೆ ಮಾಹಿತಿ ಪಡೆದ ಶಾಸಕರು ಹಾಜರಾತಿ ಕಡಿಮೆಯಿರುವ ಬಗ್ಗೆ ಪ್ರಶ್ನಿಸಿದಾಗ ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ವಸತಿ ನಿಲಯ ಪ್ರಾರಂಭವಾಗದ ಹಿನ್ನೆಲೆ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿಲ್ಲ, ಅಲ್ಲದೇ ಕೆಲವು ವಿದ್ಯಾರ್ಥಿಗಳು ಕೊಳ್ಳೇಗಾಲದಲ್ಲಿ ದಾಖಲಾಗಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಸ್ಥಳದಲ್ಲಿಯೇ ಹಿಂದುಳಿದ ವರ್ಗಗಳ ಅಧಿಕಾರಿ ಗುರುಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ಪಟ್ಟಣದಲ್ಲಿ ವಿದ್ಯಾರ್ಥಿ ನಿಲಯ ಪ್ರಾರಂಭಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಬಳಿಕ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಶಾಸಕರು, ಪ್ರಾಂಶುಪಾಲರಿಂದ ಅಗತ್ಯ ಮಾಹಿತಿ ಪಡೆದರು. ಈ ವೇಳೆ ಪ್ರಾಂಶುಪಾಲರು ಉಪನ್ಯಾಸಕರ ಕೊರತೆ ಬಗ್ಗೆ ಮತ್ತು ಕಾಲೇಜು ಕಟ್ಟಡ ಸೋರುತ್ತಿರುವ ಬಗ್ಗೆ ಶಾಸಕರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಬಿಆರ್‍ಟಿ ವೆಂಕಟರಾಜು, ಸಿಆರ್‍ಟಿ ಶ್ವೇತಾ, ಶಿಕ್ಷಕ ಚಂದ್ರಶೇಖರ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್, ಮುಖಂಡರಾದ ಮಂಗಲ ಪುಟ್ಟರಾಜು, ಉದ್ದನೂರು ಸಿದ್ಧರಾಜು ಇನ್ನಿತರರು ಹಾಜರಿದ್ದರು.