ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡಿದ ಖತರ್ನಾಕ್ ಖದೀಮ

ಅಚ್ಚರಿ ಸಂಗತಿ ಎಂದರೆ ದಂಪತಿ ಬದುಕಿದ್ದರೂ  ಮರಣ ಹೊಂದಿರುವುದಾಗಿ ದಾಖಲೆ ಸೃಷ್ಟಿಸಿ ವಂಚನೆ
ಮೈಸೂರು, ನ.14- ನಕಲಿ ದಾಖಲೆಗಳ ಸೃಷ್ಟಿಸಿ, ದಂಪತಿಗೆ ಸೇರಿದ ನಿವೇಶನವನ್ನು 25 ಲಕ್ಷ ರೂ.ಗೆ ಮಾರಾಟ ಮಾಡಿರುವ ಖತರ್ನಾಕ್ ವಿರುದ್ಧ ಮೈಸೂರಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿ.ಎಸ್.ಕಾರ್ತಿಕ್ ವಿರುದ್ಧ ಜಿ.ಎಸ್.ರಾಮಪ್ರಿಯ ಎಂಬುವರು ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಜಿ.ಎಸ್.ರಾಮಪ್ರಿಯ ಹಾಗೂ ಶ್ರೀಮತಿ ಗೀತಪ್ರಿಯ ದಂಪತಿಯ ಪುತ್ರನೆಂದು ಹೇಳಿಕೊಂಡು ಆರೋಪಿ ಕಾರ್ತಿಕ್, ಹೆಬ್ಬಾಳ 1ನೇ ಹಂತದಲ್ಲಿರುವ ನಿವೇಶನ (ಸಂ.1247)ವನ್ನು ಮಾರಾಟ ಮಾಡಿದ್ದಾನೆ. ಆತಂಕಕಾರಿ ಸಂಗತಿಯೆಂದರೆ ಜೀವಂತ ವಾಗಿರುವ ರಾಮಪ್ರಿಯ ಹಾಗೂ ಗೀತಪ್ರಿಯ ಅವರು ಮರಣ ಹೊಂದಿರುವುದಾಗಿ ನಕಲಿ ಪೌತಿ ಖಾತೆ ಮತ್ತು ನಕಲಿ ಖಾತೆ ವರ್ಗಾವಣೆ ಪತ್ರ ಇನ್ನಿತರ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ನಿವೇಶನವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಬಳಿಕ ಕೆ.ಬಸವರಾಜು ಹಾಗೂ ವಿ.ಪ್ರಾಣೇಶ್ ಅವರ ಹೆಸರಿಗೆ ಮೈಸೂರು ನಗರ(ದಕ್ಷಿಣ) ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 25 ಲಕ್ಷ ರೂ. ಕ್ರಯಕ್ಕೆ ನೋಂದಣಿ ಮಾಡಿಸಿದ್ದಾನೆ. ತಮ್ಮ ಮಾಲೀಕತ್ವ ಹಾಗೂ ಸ್ವಾಧೀನಾನು ಭವದಲ್ಲಿರುವ ನಿವೇಶನ ಬೇರೆಯವರಿಗೆ ನೋಂದಣಿ ಆಗಿರುವ ವಿಷಯ ತಿಳಿದ ರಾಮಪ್ರಿಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇಂತಹ ಪ್ರಕರಣಗಳು ಪದೇ ಪದೆ ನಡೆಯುತ್ತಿದ್ದರೂ ಮುಡಾ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ. ರಾಮಪ್ರಿಯ ಹಾಗೂ ಗೀತಪ್ರಿಯ ದಂಪತಿ ಬದುಕಿ ರುವಾಗಲೇ ಅವರ ಮರಣ ಪ್ರಮಾಣ ಪತ್ರವನ್ನು ಆರೋಪಿ ಕಾರ್ತಿಕ್ ಪಡೆದಿದ್ದು ಹೇಗೆ?, ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳ ನಕಲು ಸೃಷ್ಟಿಸಿಕೊಟ್ಟವರು ಯಾರು?, ಯಾವುದೇ ಪರಿಶೀಲನೆ ನಡೆಸದೆ ದಂಪತಿ ಮೃತರಾಗಿದ್ದಾರೆಂದು ನಿರ್ಧರಿಸಿ ಕಾರ್ತಿಕ್ ಹೆಸರಿಗೆ ಖಾತೆ ವರ್ಗಾಯಿಸಿದ್ದು ಸರಿಯೇ?, ಉಪ ನೋಂದಣಾಧಿಕಾರಿ ಗಳ ಕಚೇರಿಯಲ್ಲೂ ದಾಖಲೆ ಪರಾಮರ್ಶೆ ನಡೆಯುವುದಿಲ್ಲವೇ? ಹೀಗೆ ನೂರಾರು ಪ್ರಶ್ನೆಗಳ ಜೊತೆಗೆ ಸಾಲಸೋಲ ಮಾಡಿ ಖರೀದಿಸಿರುವ ನಿವೇಶನ ತಮಗೇ ಗೊತ್ತಿಲ್ಲದೆ ಎಲ್ಲಿ ಬೇರೆಯವರ ಸ್ವತ್ತಾಗುವುದೋ ಎಂಬ ಆತಂಕದಲ್ಲಿ ಸಾರ್ವಜನಿಕರಿದ್ದಾರೆ.