ಯುವಕನ ಬೆತ್ತಲೆ ಮೆರವಣಿಗೆಗೆ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮನ್ವಯ ವೇದಿಕೆ ಖಂಡನೆ

ಗುಂಡ್ಲುಪೇಟೆಯಿಂದ ಶನೇಶ್ವರ ದೇವಸ್ಥಾನದವರೆಗೆ ಕಾಲ್ನಡಿಗೆ ಜಾಥಾ
ಮೈಸೂರು: ಗುಂಡ್ಲುಪೇಟೆ ತಾಲೂಕಿನ ಶ್ಯಾನಾಡ್ರಹಳ್ಳಿ ಗ್ರಾಮದ ಎಸ್.ಪ್ರತಾಪ್ ಎಂಬ ಯುವಕನನ್ನು ಬೆತ್ತಲು ಮಾಡಿ ಅಮಾನವೀಯವಾಗಿ ಮೆರವಣಿಗೆ ನಡೆಸಿದ ಘಟನೆಯನ್ನು ಖಂಡಿಸಿ, `ಮನುಷ್ಯತ್ವಕ್ಕಾಗಿ ಹುಡುಕಾಟ’ ಘೋಷಣೆಯೊಂದಿಗೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮನ್ವಯ ವೇದಿಕೆ ಜೂ.17ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆಯಿಂದ ಶ್ಯಾನಾಡ್ರಹಳ್ಳಿಯ ಶನೇಶ್ವರ ದೇವಸ್ಥಾನದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ. ವೇದಿಕೆ ಗೌರವಾಧ್ಯಕ್ಷ ಹರಿಹರ ಆನಂದಸ್ವಾಮಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ದಲಿತ ಯುವಕನ ಮೇಲೆ ನಡೆಸಿರುವ ಹಲ್ಲೆ ಸಂಬಂಧ ಸರ್ಕಾರ ಮತ್ತು ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳದೆ ಕೈ ಕಟ್ಟಿ ಕುಳಿತಿವೆ. ಈ ಅಮಾನವೀಯ ಘಟನೆಯ ಬಗ್ಗೆ ದನಿ ಎತ್ತದೆ ಮೌನವಾಗಿರುವ ಮಠ ಮಾನ್ಯಗಳು, ರೈತ ಸಂಘಟನೆಗಳ ಧೋರಣೆಯನ್ನು ಖಂಡಿಸಿದರು.

ಪರೀಕ್ಷೆ ಬರೆಯಲು ಸಾಧ್ಯವಾಗದೆ ಮಾನಸಿಕವಾಗಿ ನೊಂದಿದ್ದ ಪ್ರತಾಪ್‍ನ ವಾಹ ನವೂ ಕಳುವಾಗಿತ್ತು. ಸಮೀಪದ ದೇವಸ್ಥಾನದಲ್ಲಿ ತಂಗಬೇಕಾದ ಅನಿವಾರ್ಯ ಸ್ಥಿತಿ ಉಂಟಾಗಿತ್ತು. ಆದರೆ ಆತನ ಜಾತಿ ತಿಳಿದು, ಆತನ ಮೇಲೆ ಹಲ್ಲೆ ನಡೆಸಿ, ಅಮಾನುಷ ವಾಗಿ ನಡೆದುಕೊಂಡಿರುವುದು ಇಡೀ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಸಂತ್ರಸ್ತ ಯುವಕನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು. ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಕಾಲ್ನಡಿಗೆ ಜಾಥಾ ನಡೆಸಿ ಸರ್ಕಾರವನ್ನು ಒತ್ತಾಯಿಸಲಾಗು ವುದು ಎಂದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಸೋಮಯ್ಯ ಮಲಿಯೂರು, ಚಿಕ್ಕ ಜವರಯ್ಯ, ದಸಂಸದ ಆಲಗೂಡು ಚಂದ್ರಶೇಖರ್, ಸುಭಾಷ್ ಮಾಡ್ರಹಳ್ಳಿ ಉಪಸ್ಥಿತರಿದ್ದರು.