ನಿಷ್ಕ ಕಂಪನಿ ವಂಚನೆ ವಿರುದ್ಧ ದಲಿತ ವೇದಿಕೆ ಸದಸ್ಯರ ಪ್ರತಿಭಟನೆ

ಮೈಸೂರು, ಜು. 8(ಆರ್‍ಕೆ)- ರಾಜ್ಯಾದ್ಯಂತ 4 ಲಕ್ಷಕ್ಕೂ ಹೆಚ್ಚು ಗ್ರಾಹಕರಿಂದ 100 ಕೋಟಿ ರೂ.ಗಳನ್ನು ಸಂಗ್ರಹಿಸಿ ವಂಚಿಸಿರುವ ನಿಷ್ಕ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ದಲಿತ ವೇದಿಕೆ ಸದಸ್ಯರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸಿದರು.

ಎ.ಎಂ.ಫಣಿರಾಜ್‍ಗೌಡ ಎಂಬ ವ್ಯಕ್ತಿ ನಿಷ್ಕ ಎಂಬ ಹೆಸರಿನಲ್ಲಿ ಕಂಪನಿಗಳನ್ನು ತೆರೆದು 13 ಸಾವಿರ ಏಜೆಂಟರುಗಳ ಮೂಲಕ ಮೈಸೂರು ಸೇರಿದಂತೆ ರಾಜ್ಯಾದ್ಯಂತ 4 ಲಕ್ಷ ಗ್ರಾಹಕರಿಂದ 100 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿ ಮರು ಪಾವತಿಸದೆ ವಂಚಿಸಿದ್ದಾನೆ ಎಂದು ಪ್ರತಿಭಟನಾ ಧರಣಿ ನಿರತರು ಆರೋಪಿಸುತ್ತಿದ್ದರು.

14 ಮಂದಿಯನ್ನು ನಿರ್ದೇಶಕರೆಂದು ನೇಮಿಸಿಕೊಂಡ ಫಣಿರಾಜ್‍ಗೌಡ, ವಿವಿಧೋ ದ್ದೇಶ ಸಹಕಾರ ಸಂಘ ರಚಿಸಿ ಜನರಿಂದ ಠೇವಣಿ ಹಣ ಸಂಗ್ರಹಿಸಿ ಹಿಂತಿರುಗಿಸದೇ ಮೋಸ ಮಾಡಿದ್ದು, ಆ ಬಗ್ಗೆ ಮೈಸೂರು, ಬೆಂಗಳೂರು, ಚಾಮರಾಜನಗರ ಸೇರಿದಂತೆ ವಿವಿಧ ನಗರಗಳ ಹಲವು ಠಾಣೆಗಳಲ್ಲಿ ಫಣಿರಾಜ್‍ಗೌಡ ಮತ್ತು ಇತರರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಿದ್ದರು.

ನೂರು ಕೋಟಿಗೂ ಹೆಚ್ಚು ಹಣ ವಂಚಿಸಿ ತಲೆಮರೆಸಿಕೊಂಡಿರುವ ವಂಚಕರನ್ನು ಬಂಧಿಸಬೇಕು. ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅದರಿಂದ ಬಂದ ಹಣವನ್ನು ಗ್ರಾಹಕರಿಗೆ ಸರ್ಕಾರ ಕೊಡಿಸಬೇಕೆಂದೂ ಧರಣಿ ನಿರತರು ಒತ್ತಾಯಿಸಿದರು.

ಕರ್ನಾಟಕ ದಲಿತ ವೇದಿಕೆ ಜಿಲ್ಲಾಧ್ಯಕ್ಷ ಸೋಮು, ತಾಲೂಕು ಅಧ್ಯಕ್ಷ ಧನಂಜಯ, ಜಿಲ್ಲಾ ಕಾರ್ಯದರ್ಶಿ ಕೆ.ಶಂಕರ್, ರೇವಣ್ಣ, ದಿನೇಶ, ಕುಮಾರ್, ಹೆಚ್.ವೆಂಕಟರಾಮು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.