ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಟ ದಲಿತ ಸಂಘರ್ಷ ಸಮಿತಿ ಅಹೋರಾತ್ರಿ ಧರಣಿ

ವಿರಾಜಪೇಟೆ:  ಹಲವಾರು ವರ್ಷಗಳಿಂದಲೂ ಕೊಡಗು ಜಿಲ್ಲೆಯಾದ್ಯಂತ ಮತ್ತು ವಿರಾಜಪೇಟೆ ತಾಲೂಕಿನ ಅನೇಕ ಗ್ರಾಮ ಗಳಲ್ಲಿ ವಾಸಿಸಲು ಸೂರುಗಳಿಲ್ಲದೆ ಲೈನ್ ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಆದಿವಾಸಿಗಳಿಗೆ, ವಸತಿ ರಹಿತ ಬಡವರ್ಗದ ದಲಿತರಿಗೆ, ಕೂಲಿ ಕಾರ್ಮಿಕರಿಗೆ ನಿವೇಶನ ಒದ ಗಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕಳೆದ ಎರಡು ದಿನಗಳಿಂದಲೂ ವಿರಾಜಪೇಟೆ ತಾಲೂಕು ಕಛೇರಿ ಎದುರು ಅಹೋ ರಾತ್ರಿ ಧರಣಿ ಮುಷ್ಕರ ಹಮ್ಮಿಕೊಂಡಿದ್ದಾರೆ.
ವಿರಾಜಪೇಟೆ ತಾಲೂಕಿನ ಕಾಫಿ ತೋಟದ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರನ ಗುರುತಿನ ಚೀಟಿಯನ್ನು ಮಾಲೀಕರು ವಶಪಡಿಸಿ ಕೊಂಡು ವಂಚಿಸುತ್ತಿದ್ದಾರೆ ಎಂದು ದೂರಿದರಲ್ಲದೆ. ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕಳುಹಿಸದೆ ತೋಟದಲ್ಲಿ ದುಡಿಸಿಕೊಳ್ಳು ತ್ತಿದ್ದಾರೆ. ಈ ಕುರಿತು ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಿ ಅಂತವರ ವಿರುದ್ಧ ಕ್ರಮ ಕೈಗೊಳಬೇಕು. ತಾಲೂಕಿನಾದ್ಯಂತ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸಮಿತಿ ಖಂಡಿಸುತ್ತದೆ. ಹಾಗೂ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸುವಂತಾಗಬೇಕು ಎಂದು ದಲಿತ ಸಂಘರ್ಷ ಸಮಿತಿ ಮನವಿಯಲ್ಲಿ ಒತ್ತಾಯಿಸಿದೆ.

ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ, ಕಾನೂರು, ಟಿ.ಶೆಟ್ಟಿ ಗೇರಿ, ನಾಲ್ಕೇರಿ, ಸಿದ್ದಾಪುರ, ಗೋಣಿಕೊಪ್ಪ, ಬೆಸಗೂರು, ಹುದಿಕೇರಿ, ಬೆಕ್ಕೆಸೊಡ್ಲೂರು, ದೇವರಪುರ ಹಾಗೂ ಇತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೆ ನಂ.22/2, 147/1ಪಿ.3, 370/1, ರಲ್ಲಿ ಸರಕಾರ ಮೀಸಲಿರಿಸಿರುವ ಜಾಗದಲ್ಲಿ ಪ.ಜಾತಿ ಮತ್ತು ಪಂಗಡಗಳಿಗೆ ಮನೆ ನಿರ್ಮಾಣ ಮಾಡುವಂತಾಗಬೇಕು. ಅನೇಕ ದಲಿತ ಮತ್ತು ಬಡವರ್ಗದ ಕಾಲೋನಿಗಳಿಗೆ ರಸ್ತೆಗಳೇ ಇಲ್ಲದಂತಾಗಿದೆ. ಇದ್ದರೂ ಗುಂಡಿಗಳಾಗಿವೆ, ಇದರ ಬಗ್ಗೆ ಚುನಾಯಿತ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ, ದಲಿತರ ಸಮಸ್ಯೆಗಳು ಮತ್ತು ಬೇಡಿಕೆಗಳನ್ನು ಈಡೇರಿಸುವ ತನಕ ಮುಷ್ಕರವನ್ನು ತಾಲೂಕು ಕಛೇರಿ ಮುಂಭಾಗದಲ್ಲಿಯೇ ಮುಂದು ವರಿಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದ್ದಾರೆ.

ಮುಷ್ಕರಕ್ಕೆ ಮೊದಲು ಪಟ್ಟಣದ ತೆಲುಗರ ಬೀದಿಯ ಮಾರಿ ಯಮ್ಮ ದೇವಾಲಯದಿಂದ ತಾಲೂಕು ಕಚೇರಿವರೆಗೆ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಸಂದರ್ಭ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶು ರಾಮ್, ಸಮಿತಿಯ ಜಿಲ್ಲಾ ಖಜಾಂಚಿ ಹೆಚ್.ಎಸ್.ಕುಮಾರ್ ಮಹಾದೇವ್, ವಿಭಾಗೀಯ ಸಂಚಾಲಕ ಎಚ್.ಎಸ್.ಕೃಷ್ಣಪ್ಪ, ತಾಲೂಕು ಸಂಚಾಲಕ ಹೆಚ್.ಎಸ್.ಕುಮಾರ, ಕಾರ್ಮಿಕರ ವಿಭಾಗದ ಎಚ್.ಇ.ಶಿವಕುಮಾರ್, ವಿ.ಆರ್.ರಜನಿಕಾಂತ್, ದೇವರಪುರದ ಪಿ.ಜೆ.ಸುಬ್ರಮಣಿ, ಗಿರೀಶ್, ವಿದ್ಯಾರ್ಥಿ ಒಕ್ಕೂಟದ ಸತೀಶ್ ಸೇರಿದಂತೆ ನೂರಕ್ಕೂ ಹೆಚ್ಚು ದಲಿತ ಸಮಿತಿ ಸದಸ್ಯರು ಹಾಜರಿದ್ದರು. ಪ್ರತಿಭಟನೆಯು ಮೂರನೇ ದಿನಕ್ಕೆ ಮುಂದುವರಿದಿದೆ.