ದಸರಾ ಕಾಮಗಾರಿ ಆರಂಭ

ಮೈಸೂರು,ಸೆ.14(ಎಸ್‍ಬಿಡಿ)-ದಸರಾ ಮಹೋತ್ಸವಕ್ಕೆ ಮೈಸೂ ರನ್ನು ಸಜ್ಜುಗೊಳಿಸುವ ಕಾರ್ಯ ಇದೀಗ ಗರಿಗೆದರಿದಂತೆ ಕಾಣು ತ್ತಿದೆ. `ಮೈಸೂರು ಮಿತ್ರ’ ಸೆ.14ರ ಸಂಚಿಕೆಯಲ್ಲಿ ಮೈಸೂರಿನ ರಸ್ತೆ, ಫುಟ್‍ಪಾತ್‍ಗಳ ಅವ್ಯವಸ್ಥೆಯ ಬಗ್ಗೆ `ದಸರಾ `ಅತಿಥಿ’ಗಳಿಗೆ ಹದಗೆಟ್ಟ ರಸ್ತೆ, ಫುಟ್‍ಪಾತ್ ಸ್ವಾಗತ’ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಇದರ ಬೆನ್ನಲ್ಲೇ ಪ್ರಮುಖ ವಾಣಿಜ್ಯ ಪ್ರದೇಶ ದೇವರಾಜ ಅರಸು ರಸ್ತೆಯಲ್ಲಿ ಫುಟ್‍ಪಾತ್ ದುರಸ್ತಿ ಕಾರ್ಯ ಆರಂ ಭಿಸಲಾಗಿದೆ. ಸಂತೆಪೇಟೆ ರಸ್ತೆ ಕೂಡುವ ಸ್ಥಳದಲ್ಲಿ ಅಧ್ವಾನವಾಗಿದ್ದ ಪಾದಚಾರಿ ಮಾರ್ಗವನ್ನು ದುರಸ್ತಿಗೊಳಿಸುವ ಕೆಲಸ ನಡೆಯುತ್ತಿದೆ.

ಚಾಮುಂಡಿಪುರಂ, ಅಗ್ರಹಾರ, ನಜರ್‍ಬಾದ್ ಸೇರಿದಂತೆ ವಿವಿಧೆಡೆ ರಸ್ತೆ ಗುಂಡಿಗಳಲ್ಲಿ ತುಂಬಿದ್ದ ಕಲ್ಲು-ಮಣ್ಣು ತ್ಯಾಜ್ಯವನ್ನು ತೆರವುಗೊಳಿಸಿ, ತೇಪೆ ಹಾಕಲು ಸಿದ್ಧತೆ ನಡೆದಿದೆ. ಜೆಎಲ್‍ಬಿ ರಸ್ತೆ ಸೇರಿದಂತೆ ಅನೇಕ ರಸ್ತೆಗಳ ವಿಭಜಕಗಳು, ಫುಟ್‍ಪಾತ್ ಲಾಕಿಂಗ್(ತಡೆಗೋಡೆ)ಗಳಿಗೆ ಹಳದಿ ಹಾಗೂ ಕಪ್ಪು ಬಣ್ಣದ ಪಟ್ಟಿ ಬಳಿಯುವ ಕಾರ್ಯ ಭರದಿಂದ ಸಾಗಿದೆ. ಅಂಬಾವಿಲಾಸ ಅರಮನೆ ಆವರಣದಲ್ಲಿರುವ 300ಕ್ಕೂ ಹೆಚ್ಚು ಪಾರಂಪರಿಕ ವಿದ್ಯುತ್ ಕಂಬಗಳಿಗೆ ಸಿಲ್ವರ್ ಬಣ್ಣ ಹಾಗೂ ಉದ್ಯಾನಗಳ ಗ್ರಿಲ್ ಗಳಿಗೆ ಹಸಿರು ಬಣ್ಣ ಲೇಪಿಸುವ ಕಾರ್ಯ ಮುಂದುವರೆದಿದೆ. ಸಯ್ಯಾಜಿರಾವ್ ರಸ್ತೆ ಬಂಬೂಬಜಾರ್ ಬಳಿ ಜಂಬೂಸವಾರಿ ವೀಕ್ಷಣೆಗೆ ನಿರ್ಮಿಸಿರುವ ಮೆಟ್ಟಿಲುಗಳನ್ನು ಶುಚಿಗೊಳಿಸುವ ಕೆಲಸವೂ ನಡೆಯುತ್ತಿದೆ. ಈಗಾಗಲೇ ದಸರಾ ಕಾಮಗಾರಿ ಆರಂಭವಾ ಗಿದ್ದು, ನಾಳೆಯಿಂದ ರಸ್ತೆ ಗುಂಡಿ ಮುಚ್ಚುವುದು, ಡಾಂಬರೀ ಕರಣ ಕೆಲಸಗಳು ತ್ವರಿತ ರೀತಿಯಲ್ಲಿ ನಡೆಯಲಿವೆ. ಮೈಸೂರು-ಕೆಆರ್‍ಎಸ್ ಮುಖ್ಯರಸ್ತೆ ದುರಸ್ತಿ ಸಂಬಂಧ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜು ತಿಳಿಸಿದ್ದಾರೆ.