ಅರಣ್ಯ ಹಕ್ಕು ಕಾಯ್ದೆಯಡಿ ಸವಲತ್ತಿಗೆ ಸಲ್ಲಿಕೆಯಾಗಿ ತಿರಸ್ಕೃತಗೊಂಡ ಅರ್ಜಿಗಳ ಪುನರ್ ಪರಿಶೀಲನೆ

ಮೈಸೂರು: ಅರಣ್ಯ ಹಕ್ಕು ಕಾಯ್ದೆಯಡಿ ಸವಲತ್ತು ಪಡೆಯಲು ಸಲ್ಲಿಕೆಯಾಗಿ ತಿರಸ್ಕೃತಗೊಂಡ ಅರ್ಜಿಗಳ ಪುನರ್ ಪರಿಶೀಲನೆಗೆ ರಾಜ್ಯ ಸರ್ಕಾರ ಆದೇಶಿಸಿದ್ದು, ಒಂದು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅಧಿ ಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ನಿರ್ದೇಶನ ನೀಡಿದ್ದಾರೆ.

ಈ ಸಂಬಂಧ ಜಿಲ್ಲೆಯಲ್ಲಿ ಕಾರ್ಯ ಚಟುವಟಿಕೆ ಆರಂಭಿಸಲು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಿರಸ್ಕೃತ ಅರ್ಜಿ ಗಳ ಪುನರ್ ಪರಿಶೀಲನೆ ಸಂಬಂಧ ರಾಜ್ಯ ಸರ್ಕಾರ ಏ.22ರಂದು ಸುತ್ತೋಲೆ ಹೊರ ಡಿಸಿದ್ದು, ವಿವಿಧ ಕಾರಣಗಳಿಂದ ಅರಣ್ಯ ಹಕ್ಕು ಕ್ಲೇಮು ಮಾಡಲಾಗದವರಿಗೆ ಇದೀಗ ಮತ್ತೊಂದು ಅವಕಾಶ ಲಭ್ಯವಾಗಲಿದ್ದು, ಜೂ.10ರೊಳಗೆ ಈ ಪ್ರಕ್ರಿಯೆ ಪೂರ್ಣ ಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ವಿಶೇಷ ಗ್ರಾಮ ಸಭೆ ಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಕಾಲ ಮಿತಿಯಲ್ಲಿ ಕಾರ್ಯಚಟುವಟಿಕೆ ಪೂರ್ಣ ಗೊಳಿಸಲು ಆದ್ಯತೆ ನೀಡಬೇಕು ಎಂದು ಡಿಸಿಯವರು ನಿರ್ದೇಶನ ನೀಡಿದರು.

ನೀತಿ ಸಂಹಿತೆ ಅನ್ವಯಿಸಲ್ಲ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಇರುವ ಹಿನ್ನೆಲೆ ಯಲ್ಲಿ ವಿಶೇಷ ಗ್ರಾಮ ಸಭೆಗಳನ್ನು ನಡೆಸ ಬಹುದೇ? ಎಂಬ ಕೆಲ ಅಧಿಕಾರಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಯವರು, ಹೊಸ ನೀತಿ ಘೋಷಣೆ ಹಾಗೂ ನೂತನ ಕಾರ್ಯ ಕ್ರಮ ಪ್ರಕಟಣೆ ಮಾತ್ರ ನೀತಿ ಸಂಹಿತೆ ವ್ಯಾಪ್ತಿಗೆ ಬರಲಿದ್ದು, ಸದರಿ ಕಾಯ್ದೆ ಸಂಬಂಧ ಅರ್ಜಿ ಗಳ ಪುನರ್ ಪರಿಶೀಲನೆಗೆ ಯಾವುದೇ ಅಡ್ಡಿ ಯಿಲ್ಲ ಎಂದು ಸಭೆಗೆ ಸ್ಪಷ್ಟಪಡಿಸಿದರು.

ಮುನ್ನ ಸಮಗ್ರ ಗಿರಿಜನ ಅಭಿ ವೃದ್ಧಿ ಯೋಜನೆಯ ಯೋಜನಾ ಸಮನ್ವ ಯಾಧಿಕಾರಿ ಬಿ.ಎಸ್.ಪ್ರಭಾ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆಯಡಿ ಮೈಸೂರು ಜಿಲ್ಲೆ ಯಲ್ಲಿ 6,432 ಅರ್ಜಿಗಳು ತಿರಸ್ಕೃತ ಗೊಂಡಿವೆ. ಹುಣಸೂರು ತಾಲೂಕಿನಲ್ಲಿ 1,311, ಪಿರಿಯಾಪಟ್ಟಣ ತಾಲೂಕಿನಲ್ಲಿ 989, ನಂಜನಗೂಡು ತಾಲೂಕಿನಲ್ಲಿ 266 ಹಾಗೂ ಹೆಚ್‍ಡಿ ಕೋಟೆ ತಾಲೂಕಿನಲ್ಲಿ 3,866 ಅರ್ಜಿಗಳು ಸೇರಿದಂತೆ ಒಟ್ಟಾರೆ 6,432 ಅರ್ಜಿಗಳು ತಿರಸ್ಕøತಗೊಂಡಿವೆ ಎಂದು ಮಾಹಿತಿ ನೀಡಿದರು.

ಅರ್ಜಿಗಳು ಕಾಣೆ: ಹೆಚ್‍ಡಿ ಕೋಟೆ ತಾಲೂಕು ವ್ಯಾಪ್ತಿಯಲ್ಲಿ 2008-09ರ ಸಾಲಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಸವಲತ್ತು ಪಡೆ ಯಲು ಸಲ್ಲಿಕೆಯಾಗಿ ತಿರಸ್ಕೃತಗೊಂಡ ಅರ್ಜಿಗಳು ಹಾಗೂ ಇವುಗಳಿಗೆ ಸಂಬಂಧಿ ಸಿದ ಕಡತಗಳು ಕಾಣೆಯಾಗಿವೆ ಎಂಬು ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಡಿಸಿ ಅಭಿರಾಮ್ ಜಿ.ಶಂಕರ್, ಒಂದು ದಿನದಲ್ಲಿ ಈ ಬಗ್ಗೆ ವರದಿ ನೀಡುವಂತೆ ಸಂಬಂಧಿ ಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಬಗ್ಗೆ ಮಾಹಿತಿ ನೀಡಿದ ಹೆಚ್‍ಡಿ ಕೋಟೆ ತಾಲೂಕು ಗಿರಿಜನ ಕಲ್ಯಾಣಾಧಿ ಕಾರಿ ಚಂದ್ರಪ್ಪ, ನಾಪತ್ತೆಯಾಗಿರುವ ತಿರಸ್ಕೃತ ಗೊಂಡ ಅರ್ಜಿಗಳು 2008-09ರ ಸಾಲಿ ನಲ್ಲಿ ಸಲ್ಲಿಕೆಯಾಗಿದ್ದವು. ಅವುಗಳನ್ನು ಎಲ್ಲಿ ಸಂಗ್ರಹಿಸಿಡಲಾಗಿದೆ ಎಂಬುದು ಗೊತ್ತಾಗು ತ್ತಿಲ್ಲ ಎಂದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ನೂರು ವರ್ಷಗಳ ಹಿಂದಿನ ದಾಖಲೆಗಳಾಗಿದ್ದರೆ ನಾನು ಕೇಳುತ್ತಿರಲಿಲ್ಲ. ಆದರೆ ಇವು ತೀರ ಇತ್ತೀಚಿನವು. ಹೀಗಾಗಿ ಅವುಗಳ ಬಗ್ಗೆ ನಿರ್ಲಕ್ಷ್ಯ ಮಾಡಲಾಗದು. ಇದು ಗಂಭೀರವಾದ ವಿಚಾರ ವಾಗಿದ್ದು, ಕೂಡಲೇ ಅವುಗಳನ್ನು ಹುಡು ಕಿಸಲು ಕ್ರಮ ವಹಿಸಬೇಕು. ಜೊತೆಗೆ ಒಂದು ದಿನದಲ್ಲಿ ಈ ಬಗ್ಗೆ ನನಗೆ ವರದಿ ನೀಡ ಬೇಕು ಎಂದು ತಾಕೀತು ಮಾಡಿದರು.

ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಉಪವಿಭಾಗಾಧಿಕಾರಿ ಶಿವೇಗೌಡ, ಹುಣ ಸೂರು ಉಪವಿಭಾಗಾಧಿಕಾರಿ ಚಂದ್ರಶೇಖ ರಯ್ಯ, ನಾಗರಹೊಳೆಯ ರಾಜೀವ ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕ ನಾರಾಯಣಸ್ವಾಮಿ ಮತ್ತಿತರ ಅಧಿಕಾರಿ ಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.