ಪರಿಶಿಷ್ಟರ ಕಲ್ಯಾಣ ಯೋಜನೆ ಪ್ರಗತಿಗೆ ಡಿಸಿ ತಾಕೀತು

ಚಾಮರಾಜನಗರ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ ಯಡಿ ಬಿಡುಗಡೆಯಾಗುವ ಅನುದಾನ ವನ್ನು ಶೇ.100ರಷ್ಟು ಬಳಕೆ ಮಾಡಿ ಆಯಾ ಜಾತಿ ವರ್ಗದ ಜನತೆಯ ಕಲ್ಯಾಣಕ್ಕೆ ವಿನಿ ಯೋಗಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳು ಪ್ರಸಕ್ತ ಸಾಲಿನಲ್ಲಿ ಅನುಷ್ಠಾನಗೊಳಿಸಲಿ ರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳ ಪ್ರಗತಿ ಪರಿ ಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿ ಇಲಾಖೆಗಳಿಗೆ ಆಯಾ ಕಾರ್ಯ ಕ್ರಮದ ಜತೆಯಲ್ಲಿಯೇ ಪ್ರತೀ ವರ್ಷವೂ ಎಸ್‍ಸಿ, ಎಸ್‍ಟಿ ಜನತೆಯ ಕಲ್ಯಾಣಕ್ಕೆ ಪ್ರತ್ಯೇಕ ಅನುದಾನ ನಿಗದಿ ಮಾಡಲಾಗು ತ್ತದೆ. ಈ ಅನುದಾನವನ್ನು ಸಮರ್ಪಕ ವಾಗಿ ಬಳಕೆಯಾಗುವಂತೆ ನೋಡಿಕೊಳ್ಳ ಬೇಕು. ಕಲ್ಯಾಣ ಕಾರ್ಯಕ್ರಮಗಳಿಗೆ ಅನು ದಾನ ಸದ್ಬಳಕೆಯಾಗುವಂತೆ ಅಧಿಕಾರಿ ಗಳು ಆರಂಭದಿಂದಲೇ ಗಮನ ನೀಡ ಬೇಕು ಎಂದು ತಿಳಿಸಿದರು.

ಅನೇಕ ಇಲಾಖೆಗಳಿಗೆ ಎಂದಿನಂತೆ ಕಾರ್ಯ ಕ್ರಮದಡಿ ಅನುದಾನ ನಿಗದಿಯಾಗಿದೆ. ಈಗಾಗಲೇ ಅನುದಾನ ಪಡೆದಿರುವ ಎಲ್ಲ ಇಲಾಖೆಗಳು ಗ್ರಾಮ ಸಭೆಗಳನ್ನು ನಡೆಸಿ ಫಲಾನುಭವಿಗಳ ಆಯ್ಕೆಗೆ ಕ್ರಮ ತೆಗೆದು ಕೊಳ್ಳಬೇಕು. ಇತರೆ ಇಲಾಖೆಗಳು ನಿಯ ಮಾನುಸಾರ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಮುಂದಾಗಬೇಕು ಎಂದರು.

ಅನುದಾನ ಇನ್ನು ಬರದಿರುವ ಇಲಾಖೆ ಗಳು ಕೇಂದ್ರ ಕಚೇರಿಯನ್ನು ಸಂಪರ್ಕಿಸಿ ಅನುದಾನ ಬಿಡುಗಡೆಗೆ ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಪಂಗಡಗಳ ಜನರ ಅನುದಾನ ವಿನಿ ಯೋಗದಲ್ಲಿ ವಿಳಂಬ ಮಾಡುವುದನ್ನು ಸಹಿಸಲಾಗುವುದಿಲ್ಲ. ಪರಿಶಿಷ್ಟರ ಅಭಿವೃದ್ಧಿ ಕೆಲಸಗಳಿಗೆ ನಿಗದಿಯಾದ ಅನುದಾನ ಪರಿಶಿಷ್ಟರ ಕಾಲೊನಿಯ ಕಾಮಗಾರಿಗಳಿಗೆ ನಿರ್ವಹಣೆಯಾಗಬೇಕು. ಯಾವುದೇ ದುರು ಪಯೋಗವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಪರಿಶಿಷ್ಟ ಕಲ್ಯಾಣಕ್ಕೆ ಬಿಡುಗಡೆಯಾಗುವ ಅನುದಾನ ಆಯಾ ನಿಗದಿತ ಅವಧಿ ಯಲ್ಲಿಯೇ ವೆಚ್ಚ ಮಾಡಬೇಕು. ಕಾಲಮಿತಿ ಯೊಳಗೆ ಕಾರ್ಯಕ್ರಮಗಳು ಅನುಷ್ಠಾನವಾಗ ಬೇಕು. ಕಾರ್ಯಕ್ರಮಗಳ ರೂಪುರೇಷೆ ಗಳನ್ನು ಸಿದ್ಧಪಡಿಸಿ ಮಂಜೂರಾತಿ ಪ್ರಕ್ರಿಯೆ ಯನ್ನು ತ್ವರಿತವಾಗಿ ಪೂರ್ಣಗೊಳಿಸ ಬೇಕು. ಈಗಿನಿಂದಲೇ ಪರಿಶಿಷ್ಟ ಜನರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಹರೀಶ್‍ಕುಮಾರ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆ ವಿಶೇಷ ಘಟಕ ಕಾರ್ಯಕ್ರಮಗಳಿಗೆ ಸಂಬಂಧಿ ಸಿದಂತೆ ಕ್ರಿಯಾ ಯೋಜನೆ ತಯಾರಿಕೆ, ಮಂಜೂರಾತಿ, ಸಭೆ ಆಯೋಜನೆ ಇನ್ನಿತರ ಕೆಲಸಗಳನ್ನು ವಿಶೇಷ ಗಮನ ವಿಟ್ಟು ಶೀಘ್ರ ಕೈಗೆತ್ತಿಕೊಳ್ಳಬೇಕು. ನಿಗದಿತ ಗುರಿ ಅನುಸಾರ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಎಚ್.ಸತೀಶ್, ಪರಿ ಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೃಷ್ಣಪ್ಪ ಅನುದಾನ ಬಿಡುಗಡೆ ವಿವರ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ತಿರು ಮಲೇಶ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಪ್ರಕಾಶ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇ ಶಕ ಆರ್.ರಾಚಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ದೇವ ರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹದೇವಪ್ಪ ಸೇರಿ ದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.