ಮರಣಕೂಪವಾಗಿರುವ ಕೊಡಗಿನ ಚಾರಣ ಪ್ರದೇಶಗಳು

ಮಡಿಕೇರಿ: ದಕ್ಷಿಣ ಭಾರತದ ಲ್ಲಿಯೇ ಕೊಡಗು ಜಿಲ್ಲೆ ಚಾರಣಯೋಗ್ಯ ಸ್ಥಳವಾಗಿ ಖ್ಯಾತಿ ಪಡೆದಿತ್ತಲ್ಲದೇ, ಇಲ್ಲಿನ ಬೆಟ್ಟಗುಡ್ಡಗಳು ದೇಶವಿದೇಶಗಳ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದಂತಿದ್ದವು. ಆದರೆ ಪ್ರಕೃತಿಯ ಮುನಿಸಿಗೆ ಈ ಚಾರಣ ಯೋಗ್ಯವಾದ ಪ್ರದೇಶಗಳೆಲ್ಲ ಮರಣ ಕೂಪ ಗಳಾಗಿ ಪರಿವರ್ತನೆಯಾಗಿವೆ.

ನಿಶಾನೆ ಮೊಟ್ಟೆ, ತಡಿಯಂಡಮೋಳ್, ಮಾಂದಲಪಟ್ಟಿ, ಕೋಟೆಬೆಟ್ಟ, ಪುಪ್ಪಗಿರಿ, ಕುಡಿಯ ಹಾರಿದ ಕಲ್ಲು ಬೆಟ್ಟ, ಕೆಪಟ್ಟಿ ಮಲೆ, ಎರಡನೇ ಮೊಣ್ಣಂಗೇರಿ, ವಣಚಲು, ಮಕ್ಕಳ ಗುಡಿಬೆಟ್ಟ, ಗರ್ಲಾಲೆ, ಸೂರ್ಲಬ್ಬಿ, ಕಾಲೂರು ಸೇರಿದಂತೆ ಹಲವು ಗ್ರಾಮೀಣ ಪ್ರದೇಶ ಗಳಲ್ಲಿದ್ದ ಹತ್ತಾರು ಬೆಟ್ಟಗಳ ಮೂಲಕ ಚಾರಣಿಗರು ನೆಮ್ಮದಿಯ ಹೆಜ್ಜೆ ಹಾಕು ತ್ತಿದ್ದರು. ಕಾಡು ಜೀವಿಗಳನ್ನು ಕುತೂಹಲ ದಿಂದ ವೀಕ್ಷಿಸುತ್ತಾ, ಗ್ರಾಮೀಣ ಜೀವನ ಕ್ರಮ ದತ್ತ ಬೆರಗಿನ ನೋಟ ಹಾಯಿಸುತ್ತಾ ಸಾಗು ವುದೇ ಕೊಡಗಿನ ಬೆಟ್ಟದ ಚಾರಣ ವಿಶೇಷ ವಾಗಿತ್ತು. ಆದರೆ, ಕಳೆದ ತಿಂಗಳು ಸಂಭವಿ ಸಿದ ಪ್ರಕೃತಿಯ ವಿಕೋಪ ಈ ಚಾರಣ ಪ್ರದೇಶಗಳನ್ನೇ ನುಚ್ಚುನೂರು ಮಾಡಿದೆ. ಆಕಾಶಕ್ಕೆ ಸವಾಲೆಸೆಯುವಂತಿದ್ದ ಬೆಟ್ಟಗಳು ಹೇಳಹೆಸರಿಲ್ಲದಂತೆ ಉರುಳಿ ಬಿದ್ದಿದೆ. ನಾವು ನಡೆಯುತ್ತಿದ್ದ ಬೆಟ್ಟ ಶ್ರೇಣಿ ಗಳು ಇದೇನಾ ಎಂದು ಬಿದ್ದಿರುವ ಮಣ್ಣು ನೋಡಿ ಚಾರಣಿಗರು ಬೇಸರ ವ್ಯಕ್ತಪಡಿಸುತ್ತಿ ದ್ದಾರೆ. ಮಡಿಕೇರಿಯಲ್ಲಿ ಕಳೆದ ಒಂದೂ ವರೆ ವರ್ಷಗಳ ಹಿಂದೆ 56 ಚಾರಣಿಗ ಸದಸ್ಯರನ್ನು ಹೊಂದಿ ಪ್ರಾರಂಭಗೊಂಡ ಆರೋಹಣ ಎಂಬ ಚಾರಣಿಗರ ತಂಡ ಈ ಅವಧಿಯಲ್ಲಿ 22 ಬಾರಿ ಚಾರಣ ಕೈಗೊಂಡಿದೆ. ಇದೀಗ ಮತ್ತೆ ಆರೋ ಹಣ ತಂಡದ ಸದಸ್ಯರು ತಾವು ಹೆಜ್ಜೆ ಹಾಕಿದ್ದ ಬೆಟ್ಟಗಳು ಈಗ ಹೇಗಿದೆ ಎಂದು ನೋಡಲು ಆತಂಕದಲ್ಲಿಯೇ ತೆರಳಿದಾಗ ಅಲ್ಲಿ ಕಂಡ ದೃಶ್ಯಗಳು ಚಾರಣಿಗರ ಕಣ್ಣಲ್ಲಿ ನೀರೂರಿಸುವಂತಿತ್ತು.

ಎಷ್ಟೋ ಶತಮಾನಗಳಿಂದ ಈ ಭೂಮಿ ಯಲ್ಲಿ ತಲೆಎತ್ತಿದ್ದ ಬೆಟ್ಟಗಳೇ ನಾಶವಾಗಿದೆ. ಬೆಟ್ಟಗಳಲ್ಲಿದ್ದ 200-300 ವರ್ಷದ ಗಟ್ಟಿ ಮರಗಳೂ ತರಗಲೆಯಂತೆ ಮುರಿದು ಬಿದ್ದಿದೆ. ಬೆಟ್ಟಗಳಿಂದ ಬಂಡೆಕಲ್ಲುಗಳು ಜಾರುತ್ತಾ ಧರೆಗುರುಳಿ ಬಿದ್ದಿದೆ. ಚಾರಣ ಹಾದಿಯ ಅಲ್ಲಲ್ಲಿ ಕಂಡು ಬರುತ್ತಿದ್ದ ಜಲಮೂಲ ಗಳೇ ಕಣ್ಮರೆಯಾಗಿದೆ. ಬದಲಿಗೆ, ಬಂಡೆ ಗಳಿಂದ ಹೊಸ ತೊರೆಗಳು ಸೃಷ್ಟಿಯಾಗಿ ಹೊಸ ನದಿಗಳು ಗೋಚರಿಸುತ್ತವೆ ಎಂದು ಆರೋಹಣ ತಂಡದ ಮುಖ್ಯಸ್ಥ ಕೆ.ಕೆ. ಮಹೇಶ್ ಕುಮಾರ್ ‘ಮೈಸೂರುಮಿತ್ರ’ ನೊಂದಿಗೆ ಹೇಳಿದರು.

ಇನ್ನೇನಿದ್ದರೂ ಪ್ರಕೃತಿಯೇ ತನ್ನನ್ನು ಸರಿಪಡಿಸಿಕೊಳ್ಳಬೇಕು. ಮತ್ತೆ ಸೌಂದ ರ್ಯದ ಹೊದಿಕೆಯನ್ನು ಭೂ ದೇವಿಯೇ ಹೊದ್ದುಕೊಳ್ಳಬೇಕು. ಇದು ನಿಸರ್ಗ ನಿಯಮ ಎಂಬುದು ಆರೋಹಣ ತಂಡದ ಸದಸ್ಯರ ಅನಿಸಿಕೆ. ಸದ್ಯಕ್ಕಂತೂ ಕೊಡಗಿನ ಚಾರಣ ಮಾರ್ಗ ಚಾರಣಿಗರ ಪಾಲಿಗೆ ಕೆಲ ತಿಂಗಳು ಮುಚ್ಚಿದೆ.