ಕುರುಬಾರಹಳ್ಳಿ ಸರ್ವೆ ನಂ.4ರ ಲಲಿತ ಮಹಲ್ ಹೆಲಿಪ್ಯಾಡ್ ಬಳಿಯ ಜಾಗದಲ್ಲಿ ಡೆಬ್ರಿಸ್ ತೆರವು ಕಾರ್ಯ

ಮೈಸೂರು: 2015ರಲ್ಲಿ ಜಿಲ್ಲಾಧಿಕಾರಿ ಗಳು ‘ಬಿ’ ಖರಾಬು ಎಂದು ಆದೇಶಿಸಿರುವ ವಿವಾದಿತ ಕುರುಬಾರಹಳ್ಳಿ ಗ್ರಾಮದ ಸರ್ವೆ ನಂಬರ್ 4ರ ಬ್ಲಾಕ್ 5ಎ ಮತ್ತು ಸಿ ಪ್ರದೇಶದಲ್ಲಿ ಶೇಖರಣೆಯಾಗಿರುವ ಡೆಬ್ರಿಸ್(ಕಟ್ಟಡ ತ್ಯಾಜ್ಯ) ಅನ್ನು ಖಾಸಗಿ ವ್ಯಕ್ತಿಯೊಬ್ಬರು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ.

ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಬಳಿ ಲಲಿತಾ ದ್ರಿಪುರಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿ ರುವ ಸಿ ಬ್ಲಾಕ್‍ನಿಂದ ಪಕ್ಕದ ಎ ಬ್ಲಾಕಿನ ತಗ್ಗು ಪ್ರದೇಶಕ್ಕೆ ಕಟ್ಟಡ ತ್ಯಾಜ್ಯವನ್ನು ಜೆಸಿಬಿ ಬಳಸಿ ಟ್ರಾಕ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಸಾರ್ವಜನಿಕರು ರಾತ್ರಿ ವೇಳೆ ಕಟ್ಟಡ ತ್ಯಾಜ್ಯವನ್ನು ತಂದು ಸುರಿದಿರುವುದರಿಂದ ಸಿ ಬ್ಲಾಕಿನ ಸ್ಥಳದಲ್ಲಿ ಗುಡ್ಡದಂತೆ ರಾಶಿಯಾಗಿ ಅದರ ಸುತ್ತಲೂ ಗಿಡ ಮರಗಳು ಬೆಳೆದು ದಟ್ಟ ಅರಣ್ಯ ದಂತಾಗಿದೆ. ಆದರೆ ತುಸು ದೂರದಲ್ಲಿರುವ ಎ ಬ್ಲಾಕ್ ತಗ್ಗು ಪ್ರದೇಶವಾಗಿರುವುದರಿಂದ ಈ ಕಾರ್ಯ ಮಾಡಿ ಸುತ್ತಿರುವುದಾಗಿ ಕೆ.ಮನು ತಿಳಿಸಿದ್ದಾರೆ.

ತಾವು ಕುರುಬಾರಹಳ್ಳಿ ಸರ್ವೆ ನಂಬರ್ 4ರ 5ಎ ಬ್ಲಾಕಿನ 5 ಎಕರೆ ಮತ್ತು 5ಸಿ ಬ್ಲಾಕಿನ 2 ಎಕರೆ ಸೇರಿ ಒಟ್ಟು 8 ಎಕರೆ ಭೂಮಿಯನ್ನು ಮಾಲೀಕರಾದ ಶ್ರೀಮತಿ ಮೀನಾಕ್ಷಿ ಅವರಿಂದ ಮುಖ್ತ್ಯಾರಾನಾಮೆ(GPA Holder) ಪಡೆದಿದ್ದೇನೆ ಎಂದು ಕೆ.ಮನು ಸ್ಥಳಕ್ಕೆ ಭೇಟಿ ನೀಡಿದ್ದ ‘ಮೈಸೂರು ಮಿತ್ರ’ ಪ್ರತಿನಿಧಿಗೆ ತಿಳಿಸಿದರು.

ಸದರಿ ಕುರುಬಾರಹಳ್ಳಿ ಸರ್ವೆ ನಂಬರ್ 4ರ ಜಮೀನು ಗಳು ‘ಬಿ’ ಖರಾಬು ಎಂದು ಆರ್‍ಆರ್‍ಟಿ 540/2014-2015ರಲ್ಲಿ 2015ರ ಮೇ 26ರಂದು ಅಂದಿನ ಜಿಲ್ಲಾಧಿಕಾರಿ ಗಳು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಮೀನಾಕ್ಷಿ ಅವರು ರಾಜ್ಯ ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು. ಇದೀಗ ನಾನು ಜಿಪಿಎ ಪಡೆದಿರುವ ಜಾಗದಲ್ಲಿ ಡೆಬ್ರೀಸ್ ಶೇಖರಣೆಯಾಗಿರುವುದರಿಂದ ತೆಗೆದು ಸ್ವಚ್ಛಗೊಳಿಸುತ್ತಿದ್ದೇನಷ್ಟೇ. ಅಲ್ಲಿ ಬೇರೆ ಏನನ್ನೂ ಮಾಡುತ್ತಿಲ್ಲ ಎಂದು ಮನು ತಿಳಿಸಿದ್ದಾರೆ.