ಬಳಕೆಯಾಗದ ಡೆಬಿಟ್, ಕ್ರೆಡಿಟ್ ಕಾರ್ಡ್‍ಗಳ  ಆನ್‍ಲೈನ್ ವಹಿವಾಟನ್ನು ನಿಷ್ಕ್ರಿಯಗೊಳಿಸಲು ನಿರ್ಧಾರ

ನವದೆಹಲಿ, ಜ.16-ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಹೊಸ ಕ್ರಮಗಳನ್ನು ಕೈಗೊಂಡಿದೆ. ಆನ್‍ಲೈನ್ ಪಾವತಿ, ಸಂಪರ್ಕ ರಹಿತ ವಹಿ ವಾಟುಗಳಿಗೆ ಒಮ್ಮೆಯೂ ಬಳಕೆ ಆಗದ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‍ಗಳ ಆನ್‍ಲೈನ್ ಪಾವತಿ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಎಲ್ಲಾ ಬ್ಯಾಂಕ್‍ಗಳಿಗೂ ಆರ್‍ಬಿಐ ಸೂಚಿಸಿದೆ. 2020ರ ಮಾರ್ಚ್ 16ರಿಂದ ನೂತನ ನಿಯಮ ಜಾರಿಯಾಗಲಿದೆ. ಸದ್ಯ ಚಾಲ್ತಿಯಲ್ಲಿರುವ ಕಾರ್ಡ್ ಗಳು ಒಮ್ಮೆಯೂ ಆನ್‍ಲೈನ್/ಇಂಟರ್ ನ್ಯಾಷನಲ್ /ಕಾಂಟ್ಯಾಕ್ಟ್ ಲೆಸ್ ವಹಿವಾಟಿಗೆ ಬಳಕೆ ಆಗದೇ ಇದ್ದರೆ ಈ ಸೇವೆಗಳ ಸೌಲಭ್ಯವನ್ನು ಕಡ್ಡಾಯವಾಗಿ ಕಡಿತಗೊಳಿಸ ಲಾಗುವುದು ಎಂದು ಬುಧವಾರ (ಜ.15) ಹೊರಡಿಸಲಾದ ಅಧಿಸೂಚನೆಯಲ್ಲಿ ಆರ್‍ಬಿಐ ತಿಳಿಸಿದೆ. ಆದರೆ ಕಾರ್ಡ್ ದಾರರು ಎಟಿಎಂ ಸೇವೆಗಳನ್ನು ಎಂದಿನಂತೆಯೇ ಬಳಸಿ ಕೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಕಾರ್ಡ್‍ನ ಸೇವೆಗಳಲ್ಲಿ ದೇಶೀಯ ಪಾವತಿ ಸೇವೆಗಳು ಅಥವಾ ಅಂತಾರಾಷ್ಟ್ರೀಯ ವಹಿವಾಟು ಯಾವುದನ್ನು ನಿಷ್ಕ್ರಿಯ ಗೊಳಿಸಬೇಕು ಎಂಬ ನಿರ್ಧಾರ ಬ್ಯಾಂಕ್‍ಗೆ ಬಿಟ್ಟಿದ್ದಾಗಿದೆ.

ಡೆಬಿಟ್/ಕ್ರೆಡಿಟ್ ಕಾರ್ಡ್‍ಗಳು ಬಲು ಸುಲಭದಲ್ಲಿ ವಂಚನೆಗೆ ತುತ್ತಾಗಬಲ್ಲವು. ಅದರಲ್ಲೂ ಗ್ರಾಮೀಣ ಜನತೆ ಸೈಬರ್ ವಂಚಕರ ಜಾಲಕ್ಕೆ ಬಲು ಸರಾಗವಾಗಿ ಸಿಲುಕಿ ಬಿಡಬಲ್ಲರು. ಹಾಗಾಗಿ ಗ್ರಾಹಕರ ಹಿತದೃಷ್ಟಿಯಿಂದಲೇ ಈ ಅನಗತ್ಯ ಸೇವೆಗಳನ್ನು ಕಡಿತಗೊಳಿಸುವ ಕ್ರಮಕ್ಕೆ ಆರ್‍ಬಿಐ ಮುಂದಾಗಿದೆ. ಭಾರತದಲ್ಲಿ 80 ಕೋಟಿ ಡೆಬಿಟ್ ಕಾರ್ಡ್‍ಗಳು ಚಾಲ್ತಿಯಲ್ಲಿವೆ. 5 ಕೋಟಿ ಕ್ರೆಡಿಟ್ ಕಾರ್ಡ್‍ಗಳು ಬಳಕೆಯಲ್ಲಿವೆ. ಇದರ ಜತೆಗೆ ಕೇಂದ್ರ ಸರ್ಕಾರ ಡಿಜಿಟಲೈಸ್ ವಹಿವಾಟಿಗೂ ಆದ್ಯತೆ ನೀಡುತ್ತಿದೆ.