ಮೈಸೂರು,ಜೂ.23(ಪಿಎಂ)- ಲೋಕಸಭಾ ಚುನಾವಣೆಯಲ್ಲಿ ಸ್ವಾರ್ಥ ರಾಜ ಕಾರಣದಿಂದ ಮೈತ್ರಿ ಅಭ್ಯರ್ಥಿಗಳು ರಾಜ್ಯದಲ್ಲಿ ಸೋತರೇ ಹೊರತು ಬಿಜೆಪಿ ಕಾರಣಕ್ಕಲ್ಲ ಎಂದು ಚಿಂತಕ ದಿನೇಶ್ ಅಮಿನ್‍ಮಟ್ಟು ವಿಶ್ಲೇಷಿಸಿದರು.
ಮೈಸೂರಿನ ಕಲಾಮಂದಿರದ ಮನೆ ಯಂಗಳದಲ್ಲಿ ದೇಸಿರಂಗ ಸಾಂಸ್ಕøತಿಕ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿ ಕೊಂಡಿದ್ದ ಪ್ರಗತಿಪರ ಚಿಂತಕ ಪ್ರೊ.ಕೆ. ರಾಮದಾಸ್ ನೆನಪಿನ ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಸೋತರೆ ಯಾರು ಹೆಚ್ಚು ಖುಷಿಪಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ. ಇಂದಿನ ಪ್ರಾದೇಶಿಕ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಸಿದ್ದಾಂತ ಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ ವಾಗುತ್ತಿದೆ. ಹೀಗಾಗಿಯೇ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಸೋಲಲು ಕಾರಣವಾಯಿತು. ಬಿಜೆಪಿಗೆ ಒಂದು ಸಿದ್ಧಾಂತವಿದ್ದು, ಜನರನ್ನು ಮರುಳು ಮಾಡುವ ಈ ಪಕ್ಷವನ್ನು ಮಣಿ ಸಲು ಸೈದ್ಧಾಂತಿಕ ಹೋರಾಟ ಒಂದೇ ಮಾರ್ಗ ಎಂದು ಹೇಳಿದರು.
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ನುಂಗುತ್ತಿವೆ. ಕಾಂಗ್ರೆಸ್ ತನ್ನ ವೈಫಲ್ಯ ದಿಂದ ಚುನಾವಣೆಯಲ್ಲಿ ಸೋಲುತ್ತಿದ್ದು, ಅದರ ಸ್ಥಾನವನ್ನು ಪ್ರಾದೇಶಿಕ ಪಕ್ಷಗಳು ಹಿಡಿದಿಟ್ಟುಕೊಳ್ಳಲಾಗದೇ ಬಿಜೆಪಿಗೆ ಬಿಟ್ಟುಕೊಡುತ್ತಿವೆ. ಕಾಂಗ್ರೆಸ್ ಪಕ್ಷ ಸಾಯಬೇಕೆಂದು (ಕಾಂಗ್ರೆಸ್ ಮಸ್ಟ್ ಡೈ) ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿಕೆ ನಿಜ ಅನಿಸುತ್ತದೆ. ಈಗಿನ ಕಾಂಗ್ರೆಸ್ ಪಕ್ಷ ಸತ್ತಿದೆ. ಆದರೆ ಬಿಜೆಪಿ ಸಿದ್ಧಾಂತದೊಂದಿಗೆ ಕಾರ್ಯ ತಂತ್ರ ರೂಪಿಸಿ ಸಫಲವಾಗುತ್ತಿದೆ ಎಂದರು.
ಈ ಹಿಂದೆ ಮೈಸೂರು, ಹಂಪಿ, ಕುವೆಂಪು ವಿಶ್ವವಿದ್ಯಾನಿಲಯಗಳಿಂದ ವಿದ್ಯಾರ್ಥಿಗಳು ಹೊರಬರುತ್ತಿದ್ದರು. ಆದರೆ ಈಗ ವಾಟ್ಸ್‍ಆ್ಯಪ್ ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಇವರಿಗೆ ಇತಿಹಾಸದ ಅರಿವಿಲ್ಲ. ವಾಟ್ಸಾಪ್‍ನಲ್ಲಿ ಕಂಡದ್ದೇ ಇವರಿಗೆ ಇತಿಹಾಸ. ಹೀಗಾಗಿ ಇವರು ಸುಳ್ಳು ಸುದ್ದಿಗಳಿಗೆ ಮಾರು ಹೋಗುತ್ತಿದ್ದಾರೆ ಎಂದು ವಿಷಾದಿಸಿದರು.
ರೈತ ನಾಯಕಿ ಸುನಂದಾ ಜಯರಾಂ ಪುಸ್ತಕ ಬಿಡುಗಡೆ ಮಾಡಿದರು. ಸಮಾಜವಾದಿ ಪ.ಮಲ್ಲೇಶ್, ರಂಗ ನಿರ್ದೇಶಕ ಮಂಡ್ಯ ರಮೇಶ್, ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೃಷ್ಣ ಜನಮನ ಮತ್ತಿತರರು ಹಾಜರಿದ್ದರು.