ಚುನಾವಣೆಗೆ ಬಳಕೆಯಾಗಿದ್ದ ಕಾರಿನ ಬಾಡಿಗೆ ಹಣಕ್ಕೆ ಆಗ್ರಹಿಸಿ: ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಮಾಲೀಕ ಪ್ರತಿಭಟನೆ

ಯಳಂದೂರು: ಕಳೆದ ವಿಧಾನಸಭಾ ಚುನಾವಣಾ ಕಾರ್ಯಕ್ಕೆ ಬಳಕೆಯಾಗಿದ್ದ ಕಾರಿನ ಬಾಡಿಗೆ ಪಾವ ತಿಸಿಲ್ಲ ಎಂದು ಆರೋಪಿಸಿ ಕಾರಿನ ಮಾಲೀಕ, ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು.

ಶನಿವಾರ ಮಧ್ಯಾಹ್ನ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿದ ಕಾರಿನ ಮಾಲೀಕ ಮಹೇಶ್, ಕಾರಿನ ಬಾಡಿಗೆ ಪಾವತಿಸುವಂತೆ ಪಟ್ಟು ಹಿಡಿದು ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು.

ವಿವರ: ಇಂದು ಮಧ್ಯಾಹ್ನ ತಹಶೀಲ್ದಾರ್ ಗೀತಾ ಜಿಲ್ಲಾಧಿಕಾರಿಗಳ ಕಚೇ ರಿಯಲ್ಲಿ ಆಯೋಜಿಸಿದ್ದ ಸಭೆಗೆ ತೆರಳುತ್ತಿದ್ದರು. ಈ ವೇಳೆ ತಾಲೂಕು ಕಚೇರಿಗೆ ಆಗಮಿಸಿದ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಹಾಗೂ ಕಾರಿನ ಮಾಲೀಕ ಮಹೇಶ್, ಕಳೆದ ವಿಧಾನಸಭಾ ಚುನಾವಣಾ ಕಾರ್ಯಕ್ಕೆ 16 ದಿನಗಳ ಕಾಲ ನನ್ನ ಕಾರನ್ನು ಬಳಸಿಕೊಳ್ಳಲಾಗಿತ್ತು. ಆದರೆ ಚುನಾವಣೆ ಮುಗಿದು 5 ತಿಂಗಳಾದರೂ, ಕಾರಿನ ಬಾಡಿಗೆ ಬಾಬ್ತು 45 ಸಾವಿರ ರೂ. ಬಾಡಿಗೆ ಇಲ್ಲಿವರೆಗೂ ಪಾವತಿಯಾಗಿಲ್ಲ. ಕಾರಿನ ಸಾಲ ಕಟ್ಟಬೇಕು. ಸಾಲ ಕಟ್ಟದಿದ್ದರೇ ಬ್ಯಾಂಕ್ ಅಧಿಕಾರಿಗಳು ಕಾರು ವಶಪಡಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಈ ಹಿಂದೆ ಕಾರಿನ ಬಾಡಿಗೆ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಮೊದಲು ನನ್ನ ಕಾರಿನ ಬಾಡಿಗೆ ಪಾವತಿಸಿ ಕೊಡಬೇಕು. ಇಲ್ಲದಿದ್ದರೇ ನಿಮ್ಮನ್ನು ಇಲ್ಲಿಂದ ಮುಂದೆ ಹೋಗಲು ಬಿಡುವು ದಿಲ್ಲ ಎಂದು ಎಚ್ಚರಿಕೆ ನೀಡಿ ತಹಶೀ ಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಪ್ರತಿ ಭಟನೆ ನಡೆಸಿದರು.

ಇದರಿಂದ ವಿಚಲಿತಗೊಂಡ ತಹಶೀಲ್ದಾರ್ ಗೀತಾ, ಕಾರಿನ ಬಾಡಿಗೆ ವಿಚಾರ ನನಗೆ ತಿಳಿದಿಲ್ಲ. ನಾನು ಇಲ್ಲಿಗೆ ಹೊಸದಾಗಿ ಬಂದಿದ್ದೇನೆ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದರು. ಇದಕ್ಕೆ ಒಪ್ಪದ ಮಹೇಶ್ ನನಗೆ ಈಗಲೇ ಬಿಲ್ ಪಾವತಿಸುವಂತೆ ಪಟ್ಟು ಹಿಡಿದರು.

ಈ ವೇಳೆ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿ ರಾಜಪ್ಪ ನಿಮ್ಮ ಕಾರಿನ ಬಿಲ್ ಸೋಮವಾರ ಮಾಡಿಸಿ ಕೊಡು ವುದಾಗಿ ತಿಳಿಸಿದರು. ಇದರಿಂದ ಕೋಪಗೊಂಡ ಮಹೇಶ್, ನೀವು ಸುಳ್ಳು ಹೇಳುತ್ತಿದ್ದೀರಾ, ಈಗಾಗಲೇ ಚುನಾವಣೆಗೆ ತೆಗೆದುಕೊಂಡಿದ್ದ ಎಲ್ಲಾ ವಾಹನಗಳ ಬಾಡಿಗೆ ಪಾವತಿ ಮಾಡಿದ್ದೀರಾ. ಆದರೆ ನನ್ನ ಕಾರಿನ ಬಿಲ್ ಮಾತ್ರ ಪಾವ ತಿಸದೇ ಏಕೆ? ವಿಳಂಬ ಮಾಡಿದ್ದೀರಾ ಎಂದು ತರಾಟೆ ತೆಗೆದುಕೊಂಡರು.

ಭರವಸೆ: ತಹಶೀಲ್ದಾರ್ ಗೀತಾ ಜಿಲ್ಲಾಧಿಕಾರಿ ಸಭೆಗೆ ಹೋಗಬೇಕಾಗಿದ್ದರಿಂದ ಜೀಪಿನ ಬಳಿ ಬಂದು ಸೋಮವಾರ ಬಿಲ್ ಪಾವತಿಸುವುದಾಗಿ ಭರವಸೆ ನೀಡಿದ ಬಳಿಕ ಮಹೇಶ್ ತನ್ನ ಪ್ರತಿಭಟನೆ ಹಿಂಪಡೆದರು. ಒಂದು ವೇಳೆ ಬಿಲ್ ಪಾವತಿಸದಿದ್ದರೆ ಕಚೇರಿ ಮುಂದೆ ನನ್ನ ಮಕ್ಕಳೊಂದಿಗೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆದರೆ ಚುನಾವಣೆ ಮುಗಿದು 5 ತಿಂಗಳು ಕಳೆದರೂ, ಕಾರಿನ ಬಾಡಿಗೆ ಪಾವತಿಸದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.