ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಇಂದು ಸ್ವಯಂ ಪ್ರೇರಿತ ರಾಜ್ಯ ಬಂದ್‍ಗೆ ಕರೆ ನೀಡಿದ ಬಿಜೆಪಿ: ಮೈಸೂರಲ್ಲಿ ಬಂದ್‍ಗೆ ಬೆಂಬಲ ಡೌಟು

ಮೈಸೂರು: ರೈತರ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ಮೇ 28ರಂದು ಬಿಜೆಪಿ ಕರೆ ನೀಡಿರುವ ರಾಜ್ಯಾದ್ಯಂತ ಸ್ವಯಂ ಪ್ರೇರಿತ ಬಂದ್‍ಗೆ ಮೈಸೂರು ನಗರದಲ್ಲಿ ಬೆಂಬಲ ದೊರೆಯುವುದು ಬಹುತೇಕ ಅನುಮಾನವಾಗಿದ್ದು, ಹೀಗಾಗಿ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ರಾಜ್ಯ ಕಬ್ಬು ಬೆಳೆಗಾರರ ಸಂಘ ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಒಂದೆಡೆ ರೈತ ಸಂಘಟನೆಗಳೇ ಬಂದ್‍ನಿಂದ ಹಿಂದೆ ಸರಿದಿದ್ದು, ಮೈಸೂರು ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ನೀಡದಿರಲು ನಿರ್ಧಾರ ಕೈಗೊಂಡಿವೆ. ಜೊತೆಗೆ ಜಿಲ್ಲಾಡಳಿತವು ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ದೈನಂದಿನ ಚಟುವಟಿಕೆಯಲ್ಲಿ ಯಾವುದೇ ವ್ಯತ್ಯಯ ಆಗುವ ಸಂಭವ ಬಹುತೇಕ ಇಲ್ಲವಾಗಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ರೈತರ ಸಾಲ ಮನ್ನಾ ವಿಚಾರದಲ್ಲಿ ರೈತ ಸಂಘ ನಿರಂತರ ಹೋರಾಟ ನಡೆಸಲಿದೆ. ಆದರೆ ನಾಳಿನ ಬಂದ್‍ಗೆ ರೈತ ಸಂಘದಿಂದ ಯಾವುದೇ ಬೆಂಬಲ ನೀಡಿಲ್ಲ. ಕಾರಣ ಸರ್ಕಾರಕ್ಕೆ ಸ್ವಲ್ಪ ದಿನಗಳ ಕಾಲಾವಕಾಶ ನೀಡುವ ಉದ್ದೇಶ ನಮ್ಮದಾಗಿದ್ದು, ಕಾಂಗ್ರೆಸ್‍ನಿಂದ ಜೆಡಿಎಸ್‍ಗೆ ಬೇಷರತ್ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ಸಾಲಮನ್ನಾ ಭರವಸೆ ಈಡೇರಿಸಲು ಅವಕಾಶವಿದೆ. ಹೀಗಾಗಿ ಸ್ವಲ್ಪ ದಿನ ಕಾಲಾವಕಾಶ ನೀಡಿ ಆದಾಗ್ಯೂ ಸಾಲಮನ್ನಾಕ್ಕೆ ಮುಂದಾಗದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಅದೇ ರೀತಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಸಾಲ ಮನ್ನಾದ ವಿಚಾರವಾಗಿಯೇ ಬಂದ್ ನಡೆಸುತ್ತಿದ್ದರೂ ನಮ್ಮ ಜೊತೆ ಈ ಸಂಬಂಧ ಬಂದ್‍ಗೆ ಕರೆ ನೀಡಿರುವ ಸಂಘಟನೆಗಳು ಚರ್ಚೆ ನಡೆಸಿಲ್ಲ. ಹೀಗಾಗಿ ನಮ್ಮ ಸಂಘಟನೆ ಬಂದ್‍ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಸಾಲಮನ್ನಾ ವಿಚಾರವಾಗಿ ಶೀಘ್ರದಲ್ಲಿ ನಮ್ಮ ಸಂಘಟನೆಯ ರಾಜ್ಯ ಸಮಿತಿ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದೇವೆ. ಮುಖ್ಯಮಂತ್ರಿಗಳ ಅಭಿಪ್ರಾಯ ಗಮನಿಸಿ ಮುಂದಿನ ನಿರ್ಣಯ ಕೈಗೊಳ್ಳಲಿದ್ದು, ನಾಳಿನ ಬಂದ್‍ಗೆ ನಮ್ಮ ಬೆಂಬಲವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಿದೆ ಎಂದು ತಿಳಿಸಿರುವ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಔಷಧ ಮಳಿಗೆ ಹಾಗೂ ಆಸ್ಪತ್ರೆಗಳ ಮಾದರಿಯಲ್ಲಿ ನಮ್ಮ ಉದ್ಯಮ ಅಗತ್ಯ ಸೇವೆಗಳ ಅಡಿಯಲ್ಲಿ ಬರುತ್ತದೆ. ಹೀಗಾಗಿ ನೈತಿಕ ಬೆಂಬಲ ನೀಡಲಾಗಿದೆ. ಹಾಗೆಯೇ ಈ ಬಂದ್ ಸಂಸ್ಕøತಿಯನ್ನು ಕೈ ಬಿಡಬೇಕೆಂದು ಒತ್ತಾಯಿಸುತ್ತೇವೆ. ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಹಿನ್ನೆಲೆಯಲ್ಲಿ ಅಲ್ಲಿಗೆ ಪ್ರವಾಸ ಕೈಗೊಳ್ಳುವವರು ಮೈಸೂರಿನತ್ತ ಧಾವಿಸುತ್ತಿದ್ದು, ಪ್ರವಾಸೋದ್ಯಮ ನಂಬಿ ಜೀವನ ಸಾಗಿಸುವವರ ಹಿತಕಾಯುವ ಹಿನ್ನೆಲೆಯಲ್ಲಿ ಮೈಸೂರು ಹೋಟೆಲ್ ಮಾಲೀಕರ ಸಂಘ ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಎಂದಿನಂತೆ ಬಸ್ ಸಂಚಾರ: ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ ನಿಲ್ಲಿಸುವ ಯಾವುದೇ ನಿರ್ಧಾರ ಮಾಡಿಲ್ಲ. ಹೀಗಾಗಿ ಎಂದಿನಂತೆ ಬಸ್ ಸಂಚಾರ ಇರಲಿದ್ದು, ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ವ್ಯತ್ಯಯವಿಲ್ಲದೆ ಬಸ್‍ಗಳು ಸಂಚಾರ ಮಾಡುತ್ತವೆ. ಅದಾಗಿಯೂ ಪರಿಸ್ಥಿತಿ ನೋಡಿಕೊಂಡು ಪ್ರಯಾಣ ಕರ ಹಿತದೃಷ್ಟಿಯಿಂದ ಸೂಕ್ತ ಕ್ರಮ ವಹಿಸಲಾಗುವುದು ಎಂದು ಕೆಎಸ್‍ಆರ್‍ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಹೆಚ್.ಶ್ರೀನಿವಾಸ್ ತಿಳಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಬೆಳಗಿನ ಶೋ ಇಲ್ಲ: ಬಂದ್ ಹಿನ್ನೆಲೆಯಲ್ಲಿ ಬೆಳಗಿನ ಪ್ರದರ್ಶನ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಮಧ್ಯಾಹ್ನ 1 ಗಂಟೆಯವರೆಗೆ ಮೈಸೂರು ನಗರದ ಚಿತ್ರಮಂದಿರಗಳು ಹಾಗೂ ಮಲ್ಟಿಫ್ಲೆಕ್ಸ್‍ಗಳಲ್ಲಿ ಚಿತ್ರ ಪ್ರದರ್ಶನ ಇರುವುದಿಲ್ಲ ಎಂದು ಮೈಸೂರು ಫಿಲ್ಮ್ ಎಕ್ಸಿಬ್ಯೂಟರ್ಸ್ ಅಸೋಶಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಎಂ.ಆರ್.ರಾಜಾರಾಂ ತಿಳಿಸಿದ್ದಾರೆ.

ಪೆಟ್ರೋಲ್ ಬಂಕ್‍ಗಳ ಬಂದ್ ಡೌಟು: ಮೈಸೂರು ಪೆಟ್ರೋಲ್ ಬಂಕ್ ಮಾಲೀಕರ ಸಂಘದಿಂದ ಬಂಕ್‍ಗಳ ಬಂದ್‍ಗೆ ಮನವಿ ಮಾಡಲಾಗಿದೆ. ಸಂಘದ ಸದಸ್ಯರೂ ಆದ ಪಾಲಿಕೆ ಸದಸ್ಯ ನಂದೀಶ್ ಪ್ರೀತಂ ಅವರೂ ಸಹ ಬಂಕ್‍ಗಳ ಮಾಲೀಕರಿಗೆ ಬಂದ್‍ಗೆ ಬೆಂಬಲ ನೀಡಲು ಕೋರಿದ್ದಾರೆ. ಅದಾಗಿಯೂ ಬಂದ್ ಮಾಡುವುದು ಇಲ್ಲವೇ ಬಿಡುವ ಬಗ್ಗೆ ಮಾಲೀಕರ ವಿವೇಚನೆಗೆ ಬಿಡಲಾಗಿದೆ ಎಂದು ಸಂಘದ ಎಸ್.ಕೆ.ದಿನೇಶ್ ತಿಳಿಸಿದರು.

ಕಟ್ಟುನಿಟ್ಟಿನ ಕ್ರಮ

ಬಂದ್ ಸಂಬಂಧ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಶಾಂತಿಯುತ ಪ್ರತಿಭಟನೆಗೆ ಯಾವುದೇ ಅಡ್ಡಿಯಿಲ್ಲ. ಆದರೆ ಕಾನೂನು ಉಲ್ಲಂಘಿಸಿ ಹಿಂಸೆಯ ಹಾದಿ ಹಿಡಿದರೆ, ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಿ ಅಗತ್ಯ ಬಂದೋಬಸ್ತ್‍ಗೆ ಕ್ರಮ ವಹಿಸಲಾಗಿದೆ. – ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಮೈಸೂರು ನಗರ ಪೊಲೀಸ್ ಆಯುಕ್ತ