ಮೈಸೂರಲ್ಲಿ ಮಳೆ ನೀರು ಚರಂಡಿಯಲ್ಲಿಹರಿಯುತ್ತಿದೆ ಮಲೀನ ನೀರು!

ಮೈಸೂರು: ಮೈಸೂರು ನಗರದ ಮಳೆ ನೀರು ಚರಂಡಿಗಳು ಬೇಸಿಗೆಯಲ್ಲೂ ಬರಿದಾಗುವುದಿಲ್ಲ. ಮಳೆ ಸುರಿಯದಿದ್ದರೂ ನೀರಿನ ಹರಿವು ಮಾತ್ರ ಕ್ಷಣವೂ ನಿಲ್ಲುವುದಿಲ್ಲ. ಅರೆ ಇದು ಹೇಗೆ ಸಾಧ್ಯವೆಂದು ಅಚ್ಚರಿಪಡಬೇಡಿ. ಈ ನೀರಿನ ಮೂಲ ತಿಳಿದರೆ ನಿಮಗೆ ಅಸಹ್ಯದ ಜೊತೆಗೆ ಆತಂಕವಾಗುತ್ತದೆ.

ಹೌದು, ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿರುವುದು ಶುದ್ಧ ನೀರಲ್ಲ. ಶೌಚಾಲಯ ಇನ್ನಿತರ ಕರ್ಮಗಳಿಗೆ ಬಳಸಿದ ಮಲೀನ ನೀರು. ಒಳಚರಂಡಿ (ಯುಜಿಡಿ) ಸೇರಬೇಕಿದ್ದ ಕಲುಷಿತ ನೀರು, ತೆರೆದ ಮಳೆ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಇದರಿಂದ ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿ, ಜಲಚರಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರಕೃತಿಗೂ ಇದು ದೊಡ್ಡ ಮಾರಕವಾಗಿದೆ. ಆದರೆ ಈ ಅವ್ಯವಸ್ಥೆಯನ್ನು ತುರ್ತಾಗಿ ಸರಿಪಡಿಸುವಲ್ಲಿ ನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ತಳೆದಿದೆ. ಪ್ರತಿ ಮನೆಗಳಲ್ಲಿ ಶೌಚಾಲಯ, ಸ್ನಾನ ಗೃಹ, ಪಾತ್ರೆ, ಬಟ್ಟೆ ತೊಳೆಯುವುದು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಬಳಸಿದ ನೀರಿನ ಹರಿವನ್ನು ಯುಜಿಡಿ ಲೈನ್‍ಗೆ ಸಂಪರ್ಕ ನೀಡಬೇಕು. ಆದರೆ ಬಹುತೇಕ ಕಡೆಗಳಲ್ಲಿ ಈ ಮಲಿನ ನೀರು ಮಳೆ ನೀರಿಗೆ ನಿರ್ಮಿಸಿರುವ ಚರಂಡಿಯಲ್ಲಿ ಹರಿಯುತ್ತಿದೆ. ನಂತರ ಇದು ದೊಡ್ಡ ಮೋರಿ ಮೂಲಕ ಕೆರೆಗಳ ಒಡಲು ಸೇರುತ್ತಿದೆ. ಆದರೆ ಇದು ನಮ್ಮ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಗಂಭೀರ ಸಮಸ್ಯೆಯಾಗಿ ಕಾಣದಿರುವುದು ವಿಷಾದನೀಯ ಸಂಗತಿ.

ಕೆರೆಯ ಒಡಲಿಗೆ ವಿಷ: ವಿದ್ಯಾರಣ್ಯಪುರಂ, ಜೆಎಸ್‍ಎಸ್ ಕಾಲೇಜು ಕಡೆಯಿಂದ ದೊಡ್ಡ ಮೋರಿಯನ್ನು ದಳವಾಯಿ ಕೆರೆಗೆ, ಪಡುವಾರಹಳ್ಳಿ, ಜಯಲಕ್ಷ್ಮೀಪುರಂ, ಗೋಕುಲಂನ ಒಂದು ಭಾಗದಿಂದ ಬರುವ ನೀರನ್ನು ಕುಕ್ಕರಹಳ್ಳಿ ಕೆರೆಗೆ, ದಟ್ಟಗಳ್ಳಿ, ವಿಜಯನಗರ, ಬೋಗಾದಿ ಕಡೆಯಿಂದ ಬರುವ ಮಳೆ ನೀರನ್ನು ಲಿಂಗಾಂಬುದಿ ಕೆರೆಗೆ, ಕ್ಯಾತಮಾರನಹಳ್ಳಿ, ಗಾಂಧಿನಗರ, ಶಾಂತಿನಗರ ಇನ್ನಿತರ ಕಡೆಯಿಂದ ಬರುವ ನೀರನ್ನು ದೇವನೂರು ಕೆರೆಗೆ, ರಾಜೀವ್‍ನಗರ, ಅಂಬೇಡ್ಕರ್ ನಗರ, ಗೌಸಿಯಾನಗರ ಕಡೆಯಿಂದ ಬರುವ ನೀರನ್ನು ಕೆಸರೆಯಲ್ಲಿರುವ ಎಸ್‍ಟಿಪಿ ಮೂಲಕ ಕಾಲುವೆಗೆ ಹರಿಸಲಾಗುತ್ತದೆ. ಯಾದವಗಿರಿ, ಬೃಂದಾವನ, ಮೇಟಗಳ್ಳಿ, ಕುಂಬಾರಕೊಪ್ಪಲು, ಬನ್ನಿಮಂಟಪದ ಕಡೆಯಿಂದ ಬರುವ ನೀರನ್ನು ಕೆಸರೆ ಬಳಿಯ ನಾಲೆಗೆ, ಹೆಬ್ಬಾಳು, ಮಹದೇಶ್ವರ ಬಡಾವಣೆ, ಟೆಲಿಕಾಂ ಲೇಔಟ್‍ನಿಂದ ಬರುವ ನೀರನ್ನು ವಿಕ್ರಾಂತ್ ಕಾರ್ಖಾನೆ ಸಮೀಪದ ಕಾಲುವೆಗೆ ಹರಿಸಲಾಗುತ್ತದೆ. ಆದರೆ ಶೌಚ ಹಾಗೂ ಸ್ನಾನ ಗೃಹದಿಂದ ಹೊರಬರುವ ಮಲೀನ ಈ ಮಳೆ ನೀರು ಚರಂಡಿ, ದೊಡ್ಡ ಮೋರಿ ಮೂಲಕ ಕೆರೆಯ ಒಡಲು ಸೇರುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಇದು ಪ್ರಾಣಿ-ಪಕ್ಷಿ, ಜಲಚರಗಳಿಗೆ ವಿಷವುಣಿಸಿದಷ್ಟೇ ಪಾಪಕೃತ್ಯ. ಇದರಿಂದ ಕೆರೆಯ ನೈರ್ಮಲ್ಯದ ಜೊತೆಗೆ ಸುತ್ತಮುತ್ತಲ ವಾತಾವರಣವೂ ಹಾಳಾಗುತ್ತಿದೆ.

ಅಧಿಕಾರಿಗಳ ಸಬೂಬು: ಮಳೆಯಿಲ್ಲದಿದ್ದರೂ ತೆರೆದ ಚರಂಡಿ ಹಾಗೂ ದೊಡ್ಡ ಮೋರಿಯಲ್ಲಿ ನೀರು ಹರಿಯುತ್ತಿದೆ. ಇದು ಎಲ್ಲಿಂದ ಬರುತ್ತಿದೆ ಎಂದು ಕೇಳಿದರೆ ಕೆಲ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಮನೆಯಲ್ಲಿ ಸಂಪ್ ಹಾಗೂ ಪ್ರತ್ಯೇಕ ಸ್ಥಳಾವಕಾಶ ಇಲ್ಲದವರು ಹೊರಭಾಗದಲ್ಲೇ ಪಾತ್ರೆ ಹಾಗೂ ಬಟ್ಟೆ ಶುಚಿಗೊಳಿಸುತ್ತಾರೆ. ಇದಕ್ಕೆ ಬಳಕೆಯಾದ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಯಾವುದೇ ಕೆರೆಗೆ ಮಲೀನ ಸೇರದಂತೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ. ಆದರೆ ಬಟ್ಟೆ, ಪಾತ್ರೆ, ವಾಹನ ತೊಳೆದ ನೀರು ಇಷ್ಟೊಂದು ಪ್ರಮಾಣದಲ್ಲಿ ಹರಿಯಲು ಸಾಧ್ಯವೇ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹಾಗೆಯೇ ಹಳೆಯ ಬಡಾವಣೆಗಳಲ್ಲಿ ಯುಜಿಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಿಸ್ಸಿಂಗ್ ಲೈನ್‍ನಿಂದಾಗಿ ಬಹುತೇಕ ಎಲ್ಲಾ ಮೋರಿಗಳಿಗೂ ಮಲೀನ ನೀರು ಸೇರುತ್ತಿದೆ. ಇವುಗಳನ್ನು ಪತ್ತೆ ಹಚ್ಚಿ ಸರಿಪಡಿಸುವ ಕೆಲಸ ಹಂತಹಂತವಾಗಿ ನಡೆಯುತ್ತಿದೆ ಎಂದು ಕೆಲ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಯುಜಿಡಿಗೆ ಮಳೆ ನೀರು: ಮಹಾರಾಜರು ವ್ಯವಸ್ಥಿತವಾಗಿ ಕಟ್ಟಿರುವ ಮೈಸೂರು ನಗರ ಅವ್ಯವಸ್ಥೆಯ ಆಗರವಾಗುತ್ತಿದೆ. ನರ್ಮ್ ಸೇರಿದಂತೆ ವಿವಿಧ ಸರ್ಕಾರಿ ಯೋಜನೆ, ಮುಖ್ಯಮಂತ್ರಿಗಳ ವಿಶೇಷ ಅನುದಾನದ ಮೂಲಕ ಕೋಟಿ ಕೋಟಿ ಹಣ ಬಂದರೂ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲು ಸಾಧ್ಯವಾಗಿಲ್ಲ. ವರ್ಷವಿಡೀ ರಸ್ತೆಯೆಲ್ಲಾ ಅಗೆದು ಒಂದಲ್ಲ ಒಂದು ಕಾಮಗಾರಿ ಮಾಡಲಾಗುತ್ತದೆ. ಆದರೆ ಯಾವುದೂ ಸಮರ್ಪಕವಾಗಿ ಪೂರ್ಣಗೊಳ್ಳುವುದಿಲ್ಲ. ಯುಜಿಡಿ ಸೇರಬೇಕಾದ ಮಲೀನ ನೀರು ಮಳೆ ನೀರು ಚರಂಡಿ ಹರಿಯುವುದು ಒಂದು ರೀತಿಯ ಸಮಸ್ಯೆ. ಹಾಗೆಯೇ ಮನೆಗಳ ಟೆರೇಸ್‍ನಿಂದ ಯುಜಿಡಿ ಲೈನ್‍ಗೆ ಪೈಪ್ ಅಳವಡಿಸಿರುವುದರಿಂದ ಮಳೆ ಬಂದಾಗ ಒತ್ತಡ ಹೆಚ್ಚಾಗಿ ಮ್ಯಾನ್‍ಹೋಲ್ ಮೂಲಕ ರಸ್ತೆಗೆ ಹರಿದು ರಾಡಿಯಾಗುತ್ತದೆ. ಒಟ್ಟಾರೆ ಯುಜಿಡಿ ಸಮಸ್ಯೆ ಮೈಸೂರಿನಲ್ಲಿ ಉಲ್ಬಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಪರಿಣಾಮಕಾರಿಯಾದ ಕ್ರಮ ಕೈಗೊಳ್ಳದಿದ್ದರೆ `ಮಲೀನ ಮೈಸೂರು’ ಅಪಕೀರ್ತಿಗೆ ನಮ್ಮೂರು ತುತ್ತಾಗುತ್ತದೆ ಎಂಬುದು ಸಾರ್ವಜನಿಕರ ಅಳಲಾಗಿದೆ.