ಮೈಸೂರು,ಜೂ.30(ಎಂಟಿವೈ)- ಮೈಸೂರಿನ ಅನಿ ಫೌಂಡೇಷನ್ ವತಿ ಯಿಂದ ಸ್ವಚ್ಛ ದಂತ ಅಭಿಯಾನದಡಿ ಬಂಡೀಪುರ ಅರಣ್ಯದ ಕ್ಯಾಂಪಸ್ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರಿಗಾಗಿ ನಡೆಸಿದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ 42 ಸಿಬ್ಬಂದಿ ಹಾಗೂ ಆಶ್ರಮ ಶಾಲೆಯ 18 ಬುಡಕಟ್ಟು ವಿದ್ಯಾರ್ಥಿಗಳು ಪಾಲ್ಗೊಂಡು ಚಿಕಿತ್ಸೆ ಪಡೆದರು.
ಕ್ಯಾಂಪಸ್‍ನಲ್ಲಿರುವ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಸಫಾರಿ ವಾಹನಗಳ ಚಾಲಕರು, ಕಳ್ಳ ಬೇಟೆ ತಡೆ ಶಿಬಿರದ ಸಿಬ್ಬಂದಿಗಳು, ಗಾರ್ಡ್, ವಾಚರ್ ಹಾಗೂ ಕುಟುಂಬ ಸದಸ್ಯರು ಪಾಲ್ಗೊಂಡು ದಂತ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದರು. ಹಲವರಿಗೆ ಹುಳುಕು ಹಲ್ಲಿಗೆ ಫಿಲ್ಲಿಂಗ್ ಮಾಡಿಸಿಕೊಂಡರು. ಕೆಲವರಿಗೆ ಹಲ್ಲನ್ನು ಕೀಳಲಾಯಿತು. ಬಹುತೇಕ ಮಂದಿಗೆ ಹಲ್ಲನ್ನು ಸ್ವಚ್ಛಗೊಳಿ ಸಲಾಯಿತು. ಇಲ್ಲಿನ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಆಸ್ಪತ್ರೆಗೆ ಬರಲು ಸಾಧ್ಯವಾಗದೇ ಇರುವುದನ್ನು ಮನಗಂಡು ಹಲ್ಲನ್ನು ಕ್ಲೀನ್ ಮಾಡುವ ಹಾಗೂ ಫಿಲ್ಲಿಂಗ್ ಮಾಡುವ ಯಂತ್ರ ವನ್ನು ಮೈಸೂರಿನಿಂದ ಬಂಡೀಪುರಕ್ಕೆ ಅನಿ ಫೌಂಡೇಷನ್ ವೈದ್ಯರು ತಂದು ಚಿಕಿತ್ಸೆ ನೀಡಿದರು.
ಆಶ್ರಮ ಶಾಲೆ ಮಕ್ಕಳು: ಬಂಡೀಪುರ ಕ್ಯಾಂಪಸ್‍ನಲ್ಲಿರುವ ಗಿರಿಜನ ಆಶ್ರಮ ಶಾಲೆಯಲ್ಲಿ 1ರಿಂದ 5ನೇ ತರಗತಿ ಓದುತ್ತಿ ರುವ 18 ವಿದ್ಯಾರ್ಥಿಗಳು ಇರುವುದನ್ನು ಮನಗಂಡ ಅನಿ ಫೌಂಡೇಷನ್‍ನ ವೈದ್ಯರು ಕ್ಯಾಂಪ್‍ಗೆ ಆ ಮಕ್ಕಳನ್ನು ಕರೆದು ಚಿಕಿತ್ಸೆ ನೀಡಿದರು. ಹಲವು ವಿದ್ಯಾರ್ಥಿಗಳಿಗೆ ಹುಳುಕು ಹಲ್ಲಿನ ಸಮಸ್ಯೆ ಇದ್ದುದು ಕಂಡು ಬಂತು. ಕೂಡಲೇ ಎಲ್ಲಾ ಮಕ್ಕಳಿಗೂ ಫಿಲ್ಲಿಂಗ್ ಮಾಡಿ ಸ್ವಚ್ಛಗೊಳಿಸಲಾಯಿತು.
ಶ್ಲಾಘನೀಯ: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ, ಮೈಸೂರಿನ ಅನಿ ಫೌಂಡೇ ಷನ್ ನಾಲ್ವರು ದಂತ ವೈದ್ಯರು ಬಂಡೀ ಪುರಕ್ಕೆ ಆಗಮಿಸಿ, ಇಲ್ಲಿನ ಸಿಬ್ಬಂದಿಗಳಿಗೆ ದಂತ ತಪಾಸಣೆ ಮತ್ತು ಚಿಕಿತ್ಸೆ ನಡೆಸಿ ಅರಣ್ಯ ಇಲಾಖೆ ಮೇಲಿನ ಕಾಳಜಿಯನ್ನು ಪ್ರದರ್ಶಿಸಿರುವುದು ಶ್ಲಾಘನೀಯ. ಇಲಾಖೆ ಅನಿ ಫೌಂಡೇಷನ್‍ನ ಸೇವಾ ಕಾರ್ಯವನ್ನು ಪ್ರಶಂಸಿಸುತ್ತದೆ ಎಂದರು.
ಈ ವೇಳೆ ಆಸ್ಪತ್ರೆಯ ದಂತ ವೈದ್ಯೆ ಡಾ.ನಿಸರ್ಗ ಕನ್ಸರ್ ಮಾತನಾಡಿ, ಮೈಸೂರು, ಮಂಡ್ಯ ಜಿಲ್ಲೆಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಸ್ವಚ್ಛ ದಂತ ಅಭಿಯಾನ ಕೈಗೊಳ್ಳಲಾಗಿದ್ದು, ಈಗಾಗಲೇ ಹಲವು ಶಾಲೆಗಳ ನೂರಾರು ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗಿತ್ತು. ಇಂದು ಬಂಡೀ ಪುರ ಅರಣ್ಯದ ಸಫಾರಿ ವಲಯದ ಸಿಬ್ಬಂದಿಗಳು, ಕುಟುಂಬದ ಸದಸ್ಯರು ಹಾಗೂ ಆಶ್ರಮ ಶಾಲೆಯ ವಿದ್ಯಾರ್ಥಿ ಗಳಿಗೆ ಚಿಕಿತ್ಸೆ ಮತ್ತು ತಪಾಸಣೆ ನಡೆಸಿ ನಮ್ಮ ಫೌಂಡೇಷನ್ ವತಿಯಿಂದ ಅರಣ್ಯ ಇಲಾಖೆಗೆ ಸೇವೆ ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬನ್ನೇರುಘಟ್ಟ ಹಾಗೂ ಆನೆಕಲ್ ಸುತ್ತಮುತ್ತ ವನ್ಯಜೀವಿ ಗಳ ಸಂರಕ್ಷಣೆಗೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವ ನಳಿನಿ ಹಾಗೂ ಅವರ ತಂಡದ ಸದಸ್ಯರು ದಂತ ತಪಾಸಣೆಗೆ ಒಳಪಟ್ಟವರಿಗೆ ಒಂದು ಆಪಲ್, ಒಂದು ದಾಳಿಂಬೆ ವಿತರಿಸಿದರು. ಈ ವೇಳೆ ದಂತ ವೈದ್ಯರುಗಳಾದ ಡಾ.ಚೈತ್ರಾ, ಡಾ. ಎನ್. ಪ್ರತಿಭಾ, ಆರ್‍ಎಫ್‍ಓ ಶ್ರೀನಿವಾಸ್, ಡಿಆರ್ ಎಫ್‍ಓ ಶಿವಕುಮಾರ್, ಮಹೇಶ್, ಸಿಬ್ಬಂದಿ ಗಳಾದ ಚಂದ್ರಶೇಖರ್, ಶಿವಾನಂದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.