ರಾಜ್ಯ ಧಾನ್ಯ ಉತ್ಪಾದನೆಯಲ್ಲಿ ಸಮರ್ಥವಾದರೆ ರೈತರ ಕನಿಷ್ಠ ಬೆಂಬಲ ಬೆಲೆಗೆ ಕೇಂದ್ರದ ಅನುದಾನ ವರ್ಗಾಯಿಸಬಹುದು

ಮೈಸೂರು,ಡಿ.10(ಪಿಎಂ)- ಕರ್ನಾಟಕ ಗ್ರಾಹಕ ರಾಜ್ಯವಾಗದೇ ತನ್ನ ಪಡಿತರ ವ್ಯವಸ್ಥೆಗೆ ಅಗತ್ಯವಿರುವ ಧಾನ್ಯ ಉತ್ಪಾದನೆ ಯಲ್ಲಿ ಸಮರ್ಥವಾದರೆ, ಆಹಾರ ಭದ್ರತಾ ಕಾಯ್ದೆಯಡಿಯ ಕೇಂದ್ರ ಸರ್ಕಾರದ ಅನು ದಾನವನ್ನು ರೈತರ ಕನಿಷ್ಠ ಬೆಂಬಲ ಬೆಲೆಗೆ ವರ್ಗಾಯಿಸಲು ಸಾಧ್ಯವಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದರು.

ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ಬೆಲೆ ಆಯೋಗದ ಜಂಟಿ ಆಶ್ರಯ ದಲ್ಲಿ `ಪಡಿತರ ವ್ಯವಸ್ಥೆಯಲ್ಲಿ ಅವಶ್ಯವಿ ರುವ ರಾಗಿ ಮತ್ತು ಭತ್ತವನ್ನು ಉತ್ಪಾದಿಸಿ ಪಡಿತರ ವ್ಯವಸ್ಥೆಯನ್ನು ಸದೃಢಗೊಳಿ ಸುವ’ ಕುರಿತಂತೆ ಮಂಗಳವಾರ ಹಮ್ಮಿ ಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಪಡಿತರ ವ್ಯವಸ್ಥೆಗೆ ಅಗತ್ಯ ವಿರುವ ಆಹಾರ ಧಾನ್ಯಗಳನ್ನು ರಾಜ್ಯದ ರೈತರೇ ಉತ್ಪಾದಿಸುವಂತಹ ವಾತಾವರಣ ಕಲ್ಪಿಸುವ ಮಾರ್ಗಗಳನ್ನು ಕಂಡುಕೊಳ್ಳಲು ಉದ್ದೇಶಿಸಲಾಗಿದೆ. ಆ ಮೂಲಕ ರಾಜ್ಯ ಸರ್ಕಾರ ಆಹಾರ ಧಾನ್ಯ ಖರೀದಿಸದೇ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ದೊರಕಿಸಲು ಬಳಸಿಕೊಳ್ಳಲು ಸಾಧ್ಯವಿದೆ. ಈ ಸಾಧ್ಯತೆ ಕುರಿತಂತೆ ಸಾಧಕ-ಭಾದಕಗಳನ್ನು ಕಂಡು ಕೊಳ್ಳಲು ಈ ಕಾರ್ಯಾಗಾರ ಆಯೋ ಜಿಸಲಾಗಿದೆ. ಅಂತಿಮವಾಗಿ ಸರ್ಕಾರಕ್ಕೆ ಅಗತ್ಯ ಶಿಫಾರಸ್ಸು ಮಾಡುವ ಬಗ್ಗೆ ಕೃಷಿ ಬೆಲೆ ಆಯೋಗ ಚಿಂತಿಸಿದೆ. ಇದಕ್ಕೆ ಬೇಕಿ ದ್ದರೆ `ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ’ ಶೀರ್ಷಿಕೆ ನೀಡಬಹುದು ಎಂದರು.

ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರದ ಪರಿಣಿತರು ಹಾಗೂ ರೈತರು ಒಳಗೊಂಡ ಈ ಕಾರ್ಯಾ ಗಾರ ಆಯೋಜಿಸಲಾಗಿದೆ. ಈಗಾಗಲೇ ಕೋಲಾರದಲ್ಲಿ ಇದೇ ರೀತಿ ಕಾರ್ಯಾ ಗಾರ ನಡೆಸಲಾಗಿದ್ದು, ರಾಜ್ಯದ ಇನ್ನಿತರ ಭಾಗಗಳಲ್ಲೂ ಕಾರ್ಯಾಗಾರ ನಡೆಸುವ ಉದ್ದೇಶ ಹೊಂದಲಾಗಿದೆ. ರಾಜ್ಯದ ಪಡಿ ತರಕ್ಕೆ ಅಗತ್ಯವಿರುವ ಧಾನ್ಯ ಉತ್ಪಾದನೆ ಸಂಬಂಧ ಇರುವ ನ್ಯೂತನತೆಗಳನ್ನು ನಿವಾರಿಸಿಕೊಳ್ಳುವತ್ತ ಹೆಜ್ಜೆ ಇಡಬೇಕಿದೆ. 30 ಲಕ್ಷ ಟನ್ ಸಂಗ್ರಹ ಸಾಮಥ್ರ್ಯ ರಾಜ್ಯ ದಲ್ಲಿದ್ದು, ಕೆಎಂಎಫ್ ರೈತರ ಸಂಪರ್ಕ ಜಾಲ ಹೊಂದಿದೆ. ಇವುಗಳನ್ನು ಬಳಸಿ ಕೊಳ್ಳುವ ವಿಧಾನಗಳ ಬಗ್ಗೆ ಚಿಂತಿಸುತ್ತಿದ್ದು, ರೈತರ ಅಭಿಪ್ರಾಯಗಳು ಮುಖ್ಯವಾಗಿವೆ. ರಾಜ್ಯಕ್ಕೆ ಅಗತ್ಯವಿರುವ ರಾಗಿ, ಭತ್ತ ಹಾಗೂ ಜೋಳ ಉತ್ಪಾದನೆಗೆ ಸೂಕ್ತ ಪ್ರದೇಶಗಳೂ ರಾಜ್ಯದಲ್ಲಿವೆ ಎಂದರು.

ದೇಶ ಸ್ವಾತಂತ್ರ್ಯ ಪಡೆದಾಗ ರಾಷ್ಟ್ರದಲ್ಲಿ 33 ಕೋಟಿ ಜನಸಂಖ್ಯೆ ಇದ್ದಿತು. ಇಷ್ಟು ಜನಸಂಖ್ಯೆಗೆ ಆಹಾರ ಪೂರೈಕೆ ಮಾಡಲು ಈ ಸಂದರ್ಭದಲ್ಲಿ ವಿದೇಶಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿ ಕೊಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು. ಯಾವುದೇ ಸ್ವತಂತ್ರ್ಯ ದೇಶದಲ್ಲಿ ಆಹಾರ ಭದ್ರತೆ ಇಲ್ಲವಾದರೆ ಅಲ್ಲಿನ ಸ್ವಾತಂತ್ರ್ಯಕ್ಕೆ ಅರ್ಥವಿರುವುದಿಲ್ಲ. 1960ರ ನಂತರ ದೇಶದ ಆಹಾರ ಭದ್ರತೆ ಬಗ್ಗೆ ಹೆಚ್ಚು ಚಿಂತನೆಗಳು ಆರಂಭವಾದವು. ಲಾಲ್ ಬಹದ್ದೂರ್ ಶಾಸ್ತ್ರಿಯವರು ಪ್ರಧಾನಿಯಾಗಿದ್ದ ಸಂದರ್ಭ ದಲ್ಲಿ ಬೀಜದಿಂದ ಹಿಡಿದು ಕೃಷಿ ಪದ್ಧತಿ, ಕೃಷಿ ಸಲಕರಣೆಗಳಾದಿಯಾಗಿ ಬದ ಲಾವಣೆ ತರಲಾಯಿತು. ಹೀಗೆ ಸುಧಾರಣಾ ಕ್ರಮಗಳು ಹಂತ ಹಂತವಾಗಿ ಜರುಗಿದ ಹಿನ್ನೆಲೆಯಲ್ಲಿ ಇಂದು ವಾರ್ಷಿಕ 285 ದಶ ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆ ದೇಶ ದಲ್ಲಿ ಸಾಧ್ಯವಾಗಿದೆ ಎಂದು ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ರೈತ ಸಂಘದ ಹೊಸಕೋಟೆ ಬಸವ ರಾಜು, ಕೆ.ಬೋರಯ್ಯ ಮತ್ತಿತರರ ರೈತ ಮುಖಂಡರೂ ಸೇರಿದಂತೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ರಾಮ ನಗರ ಜಿಲ್ಲೆಗಳ 100ಕ್ಕೂ ಹೆಚ್ಚು ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಮೈಸೂರು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಕುಮಾರ್, ಮೈಸೂರು ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಂ ತೇಶಪ್ಪ, ಮಂಡ್ಯ ವಲಯ ಕೃಷಿ ಸಂಶೋ ಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ವಾಸುದೇವನ್, ಕರ್ನಾಟಕ ಕೃಷಿ ಮಾರಾಟ ಮಂಡಳಿಯ ಮೈಸೂರು ವಿಭಾಗೀಯ ಕಚೇರಿ ಪ್ರಧಾನ ವ್ಯವಸ್ಥಾಪಕ ಮಹೇಶ್, ಮಂಡ್ಯ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್, ರಾಮನಗರ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಡಾ.ರವಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿವಣ್ಣ, ನಾಗನಹಳ್ಳಿ ಸಾವ ಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಪ್ರಕಾಶ್, ನಾಗನಹಳ್ಳಿ ವಿಸ್ತರಣಾ ಶಿಕ್ಷಣ ಘಟಕದ ಬೇಸಾಯ ತಜ್ಞ ಡಾ.ರಾಮಚಂದ್ರ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

ಮೊದಲು ರೈತರ ಕಥೆ ಕೇಳಿ. ಅಧಿಕಾರಿಗಳ
ಕಥೆ ಕೇಳಿ… ಕೇಳಿ… ಸಾಕಾಗಿದೆ…!
ಮೈಸೂರು,ಡಿ.10(ಪಿಎಂ)-ಮೊದಲು ರೈತರ ಕಥೆ ಕೇಳಿ. ಅಧಿಕಾರಿಗಳ ಕಥೆ ಕೇಳಿ… ಕೇಳಿ… ಸಾಕಾಗಿದೆ. ಕೃಷಿ ಇಲಾಖೆ ಸಂಪೂರ್ಣ ಮುಚ್ಚಿದಂತೆ ಆಗಿದ್ದು, ಈ ಇಲಾಖೆ ಯಿಂದ ರೈತರಿಗೇನು ಪ್ರಯೋಜನವಾಗುತ್ತಿಲ್ಲ. ಎಲ್ಲವನ್ನೂ ರೈತರೇ ಮಾಡಿಕೊಳ್ಳುವ ಪರಿಸ್ಥಿತಿ ಇದೆ ಎಂದು ಕಾರ್ಯಾಗಾರದಲ್ಲಿ ರೈತ ಮುಖಂಡರು ಕಿಡಿಕಾರಿದರು.
ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಮ್ಮ ಉದ್ಘಾಟನಾ ಭಾಷಣ ಮುಗಿಸಿ ಇದೀಗ ಅಧಿಕಾರಿಗಳು ಅಂಕಿ-ಅಂಶಗಳನ್ನು ನೀಡಲಿದ್ದಾರೆ ಎಂದು ಹೇಳುತ್ತಿದ್ದಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ರೈತರು ಮೊದಲು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಿ. ಅಧಿಕಾರಿ ಗಳ ಕಥೆ ಕೇಳಿ ಕೇಳಿ ನಮಗೆ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ರಾಜ್ಯ ರೈತ ಸಂಘದ ಮಂಡ್ಯದ ರೈತ ಮುಖಂಡ ಕೆ.ಬೋರಯ್ಯ, ಕೃಷಿ ಇಲಾಖೆ ಇದ್ದೂ ಇಲ್ಲದಂತಾಗಿದ್ದು, ಒಂದು ರೀತಿಯಲ್ಲಿ ಸಂಪೂರ್ಣ ಮುಚ್ಚಿದಂತೆಯೇ ಆಗಿದೆ. ರೈತರಿಗೆ ಇವರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ. ಎಲ್ಲವನ್ನೂ ರೈತರೇ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಇಲಾಖೆಯಲ್ಲಿ ಮೊದಲಿಗೆ ಶಿಸ್ತು ಇಲ್ಲ. ಸಿಬ್ಬಂದಿ ಕೊರತೆಯೂ ಇದ್ದು, ಇವರನ್ನು ದೂಷಿಸಿ ಏನು ಪ್ರಯೋಜನ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹನುಮನಗೌಡ ಬೆಳಗುರ್ಕಿ, ಕೃಷಿ ಕ್ಷೇತ್ರದಲ್ಲಿ ಸಾಧನೆ ಶಿಖರದಷ್ಟಾಗಿದ್ದರೂ ಸಮಸ್ಯೆಗಳು ಸಾಗರದಷ್ಟು ಇದ್ದೇ ಇದೆ. ರೈತರ ಸಮಸ್ಯೆಗಳನ್ನು ಅವರಿಂದ ಕೇಳಿ ತಿಳಿದುಕೊಳ್ಳಲಾಗುವುದು. ರೈತರ ಸಮಸ್ಯೆ ನಿವಾರಿಸುವ ಸಂಬಂಧ ಅಗತ್ಯ ಶಿಫಾರಸು ಸರ್ಕಾರಕ್ಕೆ ಮಾಡಲು ಆಯೋಗ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಸಮಾಧಾನಪಡಿಸಿ, ವಾತಾವರಣ ತಿಳಿಗೊಳಿಸಿದರು.