ಮುಸ್ಲಿಂ ಬಾಂಧವರಿಗೆ ದಿನಸಿ, ರಂಜಾನ್ ಕಿಟ್ ವಿತರಣೆ

ಮೈಸೂರು, ಮೇ 23(ಪಿಎಂ)- ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ರಂಜಾನ್ ಅಂಗವಾಗಿ ಮುಸ್ಲಿಂ ಬಾಂಧವರಿಗೆ ದಿನಸಿ ಕಿಟ್ ಹಾಗೂ ರಂಜಾನ್ ಕಿಟ್‍ಗಳನ್ನು ಶನಿವಾರ ವಿತರಣೆ ಮಾಡಲಾಯಿತು.

ಮೈಸೂರಿನ ಜಯನಗರದಲ್ಲಿ ಬಳಗದ ಮುಖಂಡರೂ ಆದ ಮೈಸೂರು ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹಾದೇವ ಸ್ವಾಮಿ ದಿನಸಿ ಕಿಟ್ ಹಾಗೂ ರಂಜಾನ್ ಕಿಟ್‍ಗಳನ್ನು (ಡ್ರೈಫ್ರೂಟ್ಸ್) ವಿತರಣೆ ಮಾಡಿ, ಶುಭ ಕೋರಿದರು.

ಬಳಿಕ ಮಾತನಾಡಿದ ಎಲ್.ಆರ್. ಮಹಾದೇವಸ್ವಾಮಿ, ಕೊರೊನಾ ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಆಚರಣೆ ಮಾಡಬೇಕು. ಆ ಮೂಲಕ ಕೊರಾನಾ ತಡೆ ಗಟ್ಟಲು ಸಹಕರಿಸಬೇಕು ಎಂದು ಕೋರಿದರು. ಕೊರೊನಾ ಹಿನ್ನೆಲೆಯಲ್ಲಿ ಇಡೀ ಜಗತ್ತು ಇಂದು ಸಂದಿಗ್ಧ ಪರಿಸ್ಥಿತಿ ಯಲ್ಲಿದ್ದು, ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುವ ಮೂಲಕ ಹೃದಯ ಶ್ರೀಮಂತಿಕೆ ತೋರಬೇಕು. ಹಸಿವು ಎನ್ನುವುದು ಜಾತಿ-ಮತ, ಪಂಥ ಹಾಗೂ ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಅನುಭವಕ್ಕೆ ಬರುವ ವಿಚಾರ. ಆದರೆ ಈ ನೋವು ಬಡ ಜನತೆಯನ್ನು ಕಾಡಲಿದೆ ಎಂದರು.

ಕೊರೊನಾ ಲಾಕ್‍ಡೌನ್ ಬಹುತೇಕ ಎಲ್ಲಾ ಹಂತದ ಜನತೆಯನ್ನು ಹಲವು ರೀತಿಯ ಸಂಕಷ್ಟಕ್ಕೆ ತಂದಿದೆ. ಈ ಸಂದರ್ಭದಲ್ಲಿ ಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚಬೇಕು. ಮಾನವೀಯ ಗುಣ ತೋರುವುದು ಎಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಬಿಜೆಪಿ ಮಹಿಳಾ ಮುಖಂಡರಾದ ಲಕ್ಷ್ಮೀ ದೇವಿ, ವಕೀಲ ನಾಗೇಂದ್ರ, ಮುಖಂಡ ರಾದ ಶ್ಯಾಮಲಾ, ಆನಂದ್, ವಿಕ್ರಮ ಅಯ್ಯಂ ಗಾರ್, ಪ್ರಸನ್ನ, ನಿಖಿಲ್, ಜಸ್ವಂತ್, ಅನಿಲ್, ಸತೀಶ್ ಭಟ್, ಅರಸೀಕೆರೆ ಉಮೇಶ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.