ಜನರಲ್ಲಿ ಮನೋಸ್ಥೈರ್ಯ ತುಂಬುವ ಕಾರ್ಯ ಆರಂಭ

ಮಡಿಕೇರಿ: ಭೂ ಕುಸಿತ ಹಾಗೂ ಪ್ರವಾಹ, ಮನೆ-ಕಾಫಿ ತೋಟಗಳು ಕೊಚ್ಚಿಕೊಂಡು ಹೋಗಿರುವ ಭಯಾನಕ ದೃಶ್ಯಗಳನ್ನು ಕಂಡು ಆಘಾತಗೊಂಡಿರುವ ನಿರಾಶ್ರಿತರಿಗೆ ಮಾನಸಿಕ ಸ್ಥೈರ್ಯ ತುಂಬಿ ಬದುಕಿನಲ್ಲಿ ಭರವಸೆ ಮೂಡಿಸುವ ನಿಟ್ಟಿನಲ್ಲಿ ಮಾನಸಿಕ ತಜ್ಞರಿಂದ ಕೌನ್ಸಿಲಿಂಗ್ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಕೊಡಗು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಮಾನಸಿಕ ತಜ್ಞ ವೈದ್ಯ ಡಾ.ರೂಪೇಶ್ ಗೋಪಾಲ್ ಅವರು ಜಿಲ್ಲೆಯ ವೈದ್ಯರು, ಮಾನಸಿಕ ತಜ್ಞರು ಹಾಗೂ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳಿಗೆ ಮಡಿಕೇರಿಯ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ತರಬೇತಿ ಏರ್ಪಡಿಸಿದ್ದರು.

ಡಾ.ರೂಪೇಶ್‍ಗೋಪಾಲ್ ಅವರು ಭಾರತೀಯ ಸೇನೆಯಲ್ಲಿ ಸುಮಾರು 5 ವರ್ಷ ಕಾಲ ಮಾನಸಿಕ ರೋಗ ತಜ್ಞರಾಗಿ ಸೇವೆ ಸಲ್ಲಿಸಿದ್ದು, ಅಲ್ಲಿ ಸೈನಿಕರಿಗೆ ಮಾನಸಿಕ ಸ್ಥೈರ್ಯ ತುಂಬುವುದರಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ನಿರಾಶ್ರಿತರಿಗೆ ಕೌನ್ಸಿಲಿಂಗ್ ನಡೆಸುವ ತಂಡಕ್ಕೆ ಅವರು ತರಬೇತಿ ನೀಡುತ್ತಿದ್ದಾರೆ. ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನಲ್ಲಿ ಆಗಿರುವ ಅನಾಹುತದ ವೇಳೆ ಕಣ್ಣ ಮುಂದೆಯೇ ಆಸ್ತಿ-ಪಾಸ್ತಿ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ದೇಹಾರೋಗ್ಯದ ಜೊತೆಗೆ ಅವರಿಗೆ ಮಾನಸಿಕ ಸ್ಥೈರ್ಯವನ್ನು ತುಂಬಬೇಕಾಗಿದೆ. ಆರೋಗ್ಯ ಪೂರ್ಣ ಮನಸ್ಸುಗಳನ್ನು ನಿರ್ಮಿಸುವ ಮೂಲಕ ಸಂತ್ರಸ್ತರ ಬದುಕಿನ ಬಗ್ಗೆ ಭರವಸೆ ಮುಡಿಸುವ ಕೆಲಸ ಆಗಬೇಕಾಗಿದೆ ಎಂದರು.

ಮಡಿಕೇರಿ ತಾಲೂಕಿನಲ್ಲಿಯೇ ಅತಿ ಹೆಚ್ಚು ಹಾನಿ ಸಂಭವಿಸಿದ್ದು, ಇಲ್ಲಿ ಸ್ಥಾಪಿಸಲಾಗಿರುವ ಮೈತ್ರಿ ಹಾಲ್, ಕೂರ್ಗ್ ಕಮ್ಯುನಿಟಿ ಹಾಲ್, ಅಂಬೇಡ್ಕರ್ ಭವನ, ಚೌಡೇಶ್ವರಿ ಹಾಲ್, ಬ್ರಾಹ್ಮಣರ ಕಲ್ಯಾಣ ಮಂಟಪ, ಗೆಜ್ಜೆ ಸಂಗಪ್ಪ ಕಲ್ಯಾಣ ಮಂಟಪ, ಕೊಡವ ಸಮಾಜ, ಓಂಕಾರ ಸದನ, ಜನರಲ್ ತಿಮ್ಮಯ್ಯ ಶಾಲೆ ಸೇರಿದಂತೆ 11 ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಕೌನ್ಸಿಲಿಂಗ್ ನೀಡಲು ನಿರ್ಧರಿಸಲಾಗಿದೆ. ವಿಚಲಿತಗೊಂಡ ಮನಸ್ಸುಗಳನ್ನು ಶಾಂತಗೊಳಿಸಲು ಯೋಗ ಉತ್ತಮ ಮಾರ್ಗವಾಗಿದ್ದು, 30 ಜನರನ್ನೊಳಗೊಂಡ ಯೋಗ ತಂಡ ಈಗಾಗಲೇ ಜಿಲ್ಲೆಗೆ ಆಗಮಿಸಿದೆ. ಈ ತಂಡವು ಪರಿಹಾರ ಕೇಂದ್ರಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರಿಗೂ ಯೋಗ ಕಲಿಸಲಿದ್ದಾರೆ. ಬಹುಮುಖ್ಯವಾಗಿ ಖಿನ್ನತೆಯಿಂದ ಪುರುಷರು ಮಾದಕ ವ್ಯಸನಿಗಳಾಗುವುದನ್ನು ತಡೆಯಬೇಕಾಗಿದೆ ಎಂದರು. ಜೀವನದಲ್ಲಿ ಈವರೆವಿಗೂ ನೋಡಿರದಂತಹ ಭಾರೀ ಅನಾಹುತವನ್ನು ಕಂಡು ಮಹಿಳೆಯರು ಮತ್ತು ಮಕ್ಕಳು ತೀವ್ರ ಆಘಾತಕ್ಕೊಳಗಾಗಿ ರುತ್ತಾರೆ. ಅಂತಹವರಿಗೆ ಸೃಜನಶೀಲ ಚಟುವಟಿಕೆಗಳಾದ ಸಂಗೀತ ಸ್ಪರ್ಧೆಗಳು, ಕ್ರೀಡೆ ಮುಂತಾದ ಹವ್ಯಾಸಗಳಲ್ಲಿ ತೊಡಗಿಕೊಳ್ಳುವಂತೆ ಮಾಡಿ ಅವರ ಮನಸ್ಸನ್ನು ಉಲ್ಲಾಸಗೊಳಿಸಬೇಕೆಂದು ಡಾ.ರೂಪೇಶ್‍ಗೋಪಾಲ್ ಹೇಳಿದರು.