ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಾಲಿನ ಎಟಿಎಂ

ನವದೆಹಲಿ:  ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಎಐಸಿಸಿಯ ಎಟಿಎಂ ಆಗಿದ್ದು, ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ಹವಾಲಾ ಮೂಲಕ ಕೆ.ಜಿ.ಗಟ್ಟಲೆ ಹಣ ರವಾನಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಆರೋಪಿಸಿದರು.

ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಅವರು, ಡಿ.ಕೆ. ಶಿವಕುಮಾರ್ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡೈರಿ ಬಿಡುಗಡೆ ಮಾಡಿದರು. ದೆಹಲಿಯ ಅಪಾರ್ಟ್‍ಮೆಂಟ್‍ವೊಂದರಲ್ಲಿ 8 ಕೋಟಿ ರೂ. ದೊರೆತ ಪ್ರಕರಣಕ್ಕೆ ಸಂಬಂಧಿಸಿದರಂತೆ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಎಫ್‍ಐಆರ್ ದಾಖಲಿಸಿದ್ದನ್ನು ಉಲ್ಲೇಖಿಸಿದ ಅವರು ಕಾಂಗ್ರೆಸ್ ಹೈಕಮಾಂಡ್‍ಗೆ ಕೆಜಿಗಟ್ಟಲೆ ಹಣ ರವಾನೆ ಮಾಡಲಾಗಿದ್ದು, ನಂತರ ಮಂತ್ರಿಗಳಿಗೆ ಹಣ ರವಾನೆಯಾಗಿದೆ ಎಂದರು.

ಹವಾಲಾ ಮೂಲಕ ಡಿ.ಕೆ. ಶಿವಕುಮಾರ್‌ರಿಂದ ಕಾಂಗ್ರೆಸ್ ಹೈಕಮಾಂಡ್‍ಗೆ 600 ಕೋಟಿ ರೂ. ಸಂದಾಯವಾಗಿದೆ. ಈ ಹಣವನ್ನು ಹೈಕಮಾಂಡ್‍ಗೆ ತಲುಪಿಸುವ ಸಲುವಾಗಿಯೇ ಆಂಜನೇಯ ಅವರನ್ನು ಕಾಂಗ್ರೆಸ್ ಸರ್ಕಾರ ದೆಹಲಿಯ ಕರ್ನಾಟಕ ಭವನದ ಅಧಿಕಾರಿಯಾಗಿ ನೇಮಿಸಿತ್ತು. ಅವರ ಜೊತೆಗೆ ಚಾಲಕ ರಾಜೇಂದ್ರನ್ ಕೂಡ ಈ ಕೆಲಸ ಮಾಡಿದ್ದಾರೆ. ಅವರು ಇದರ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.

ಹಣ ಸಂದಾಯವಾದ ಬಗ್ಗೆ ಡೈರಿಯಲ್ಲಿ ‘ಎಸ್‍ಜಿ’ ಮತ್ತು ‘ಆರ್‍ಜಿ’ ಎಂದು ಕೋಡ್ ವರ್ಡ್‍ಗಳಲ್ಲಿ ನಮೂದಾಗಿದೆ ಎಂದ ಅವರು, ಎಸ್‍ಜಿ ಅಂದರೇ ಸೋನಿಯಾಗಾಂಧಿ, ಆರ್‍ಜಿ ಅಂದರೆ ರಾಹುಲ್ ಗಾಂಧಿ ಎಂದು ವಿಶ್ಲೇಷಿಸಿದರಲ್ಲದೆ ಇದಕ್ಕೆ ಸೋನಿಯಾ ಮತ್ತು ರಾಹುಲ್ ಉತ್ತರಿಸಬೇಕು ಎಂದರು. ನೋಟು ಅಮಾನ್ಯೀಕರಣದ ವೇಳೆ ಕಾಂಗ್ರೆಸ್ ಯಾಕೆ ಭಾರೀ ಪ್ರತಿಭಟನೆ ನಡೆಸಿತ್ತು ಎಂಬುದು ಈಗ ತಿಳಿಯುತ್ತಿದೆ ಎಂದು ಅವರು ವ್ಯಂಗ್ಯವಾಡಿದರು.