ಬೆಳಿಗ್ಗೆ ಇಡಿ ಕಚೇರಿಯಲ್ಲಿ ವಿಚಾರಣೆ, ರಾತ್ರಿ ಪೊಲೀಸ್ ಠಾಣೆಯಲ್ಲಿ ವಾಸ್ತವ್ಯ

ಬೆಂಗಳೂರು, ಸೆ.6(ಕೆಎಂಶಿ)-ಹವಾಲಾ ಹಣ ವರ್ಗಾವಣೆ ಪ್ರಕ ರಣದಲ್ಲಿ ಜಾರಿ ನಿರ್ದೇ ಶನಾಲಯದ (ಇಡಿ) ವಶದಲ್ಲಿರುವ ಶಾಸಕ ಡಿ.ಕೆ.ಶಿವಕುಮಾರ್, ಸರಳುಗಳ ಹಿಂದೆ ನಿಂತು ಗಳಗಳನೆ ಕಣ್ಣೀರು ಹಾಕಿ ದ್ದಾರೆ. ಇ.ಡಿ. ವಶದಲ್ಲಿರುವ ಶಿವಕುಮಾರ್ ಅವರನ್ನು ದೆಹಲಿಯ ತುಘಲಕ್ ಲೇನ್ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿಯಿಂದ ಸೆಲ್‍ನಲ್ಲಿ ಇಟ್ಟಿದ್ದಾರೆ. ಮೊದಲ ದಿನ ಠಾಣಾ ವ್ಯಾಪ್ತಿಯಲ್ಲಿನ ಪೊಲೀಸರು ಮಲಗುವ ಕೊಠಡಿಯಲ್ಲಿ ಇರಿಸಿದ್ದರು, ಎರಡನೇ ದಿನ ಸರಳುಗಳಿರುವ ಸೆಲ್ ಒಳಗೆ ಇಟ್ಟಿದ್ದಕ್ಕೆ ಅವರು ಮಾನಸಿಕವಾಗಿ ಸಂಪೂರ್ಣ ಕುಸಿದಂತೆ ಕಂಡು ಬಂದರು.

ಸರಳುಗಳ ಹಿಂದೆ ನಿಂತು ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿಸಿ, ಕರ್ನಾಟಕದಲ್ಲಿ ನಾನು ದೊಡ್ಡ ನಾಯಕ, ಬಿಜೆಪಿಯವರು ನನ್ನನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದು ಹೇಳಿಕೊಂಡು ಗಳಗಳನೆ ಅತ್ತಿದ್ದಾರೆ. ಬೆಳಿಗ್ಗೆ, ಇಡಿ ಕಚೇರಿಯಲ್ಲಿ ಶಿವಕುಮಾರ್ ವಿಚಾರಣೆ, ನಂತರ ರಾತ್ರಿ ವೇಳೆ ಸರಳುಗಳ ಹಿಂದೆ ಇಡಲಾಗುತ್ತಿದೆ. ಈ ಮಧ್ಯೆ, ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕನಕಪುರ ಸಮೀಪದ ದೊಡ್ಡಾಲಹಳ್ಳಿಯಲ್ಲಿನ ಶಿವ ಕುಮಾರ್ ಮನೆಗೆ ತೆರಳಿ ಅವರ, ತಾಯಿಗೆ ಸಾಂತ್ವನ ಹೇಳಿದ್ದಾರೆ. ಕುಮಾರಸ್ವಾಮಿ ಅವ ರನ್ನು ಕಂಡೊಡನೆ ತಾಯಿ ಗೌರಮ್ಮ ಕಣ್ಣೀ ರಿಟ್ಟು, ತಮ್ಮ ಪುತ್ರನನ್ನು ರಕ್ಷಿಸುವಂತೆ ಕೋರಿ ದ್ದಾರೆ. ಇದಕ್ಕೆ ಕುಮಾರಸ್ವಾಮಿ, ನಿಮ್ಮ ಕಷ್ಟ ದಲ್ಲಿ ನಾನೂ ಭಾಗಿ, ಕಣ್ಣೀರು ಹಾಕಬೇಡಿ, ಧೈರ್ಯ ತಂದುಕೊಳ್ಳಿ ಎಂದು ಸಂತೈಸಿ, ಭಾವುಕರಾದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಮತ್ತು ಆದಾಯ ತೆರಿಗೆ (ಐಟಿ) ಅಧಿಕಾರಿಗಳನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಗುಜರಾತ್‍ನ ಕಾಂಗ್ರೆಸ್ ಶಾಸಕರಿಗೆ ಶಿವಕುಮಾರ್ ರಕ್ಷಣೆ ಕೊಟ್ಟಾಗಿನಿಂದ ನಿರಂತರವಾಗಿ ಅವರ ವಿರುದ್ಧ ಕೇಂದ್ರ ಸರ್ಕಾರ ರಾಜಕೀಯ ದ್ವೇಷ ಸಾಧಿಸುತ್ತಿದೆ. ಅವರೇನೂ ಸಾಕ್ಷ್ಯ ನಾಶ ಮಾಡಿಲ್ಲ, ನಮ್ಮ ಶಾಸಕರನ್ನು ಹೈಜಾಕ್ ಮಾಡಲು ಬಿಜೆಪಿಯವರು 30 ಕೋಟಿ ರೂ. ನೀಡಿದ್ದಾರೆ, ಅವರ ಮೇಲೆ ಯಾವ ದಾಳಿಯೂ ನಡೆಯಲಿಲ್ಲ.

ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಸಹಾ ಐಟಿ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾಗಬೇಕಾಯಿತು, ಅವರ ಮರಣ ಪತ್ರವನ್ನು ಮುಚ್ಚಿಡಲಾಗಿದೆ, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ಕರ್ನಾಟಕ ದಲ್ಲಿ ಈ ಘಟನೆ ಹೊಸ ಅಧ್ಯಾಯಕ್ಕೆ ಕಾರಣವಾಗಲಿದೆ, ಎಲ್ಲಾ ಸಮಾಜ ವನ್ನು ಗೌರವಿಸಬೇಕು, ಈ ಪ್ರಕರಣ ಖಂಡನೀಯ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎನ್ನುತ್ತಾರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡುತ್ತಿರುವುದು ದ್ವೇಷದ ರಾಜಕಾರಣ ಅಲ್ಲದೆ, ಮತ್ತಿನ್ನೇನು. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವ ಕೆಲಸ ಮಾಡುವ ಬದಲು ಇಂತಹ ದ್ವೇಷ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.