ತಿಹಾರ್ ಜೈಲಿನಿಂದ ಹೊರಬಂದ ಡಿಕೆಶಿ

ನವದೆಹಲಿ, ಅ.23-ಅಕ್ರಮ ಹಣ ವರ್ಗಾವಣೆ (ಹವಾಲ) ಪ್ರಕರಣದಲ್ಲಿ ತಿಹಾರ್ ಕಾರಾಗೃಹ ಸೇರಿದ್ದ ಕಾಂಗ್ರೆಸ್ ಟ್ರಬಲ್ ಶೂಟರ್ ಹಾಗೂ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಇಂದು ಷರತ್ತುಬದ್ಧ ಜಾಮೀನು ನೀಡಿದೆ. ರಾತ್ರಿ 9 ಗಂಟೆ ವೇಳೆಗೆ ತಿಹಾರ್ ಜೈಲಿನಿಂದ ಡಿಕೆಶಿ ಬಿಡುಗಡೆಯಾದರು.

ಜಾಮೀನು ದೊರೆತ ಕ್ಷಣದಿಂದಲೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ರಾತ್ರಿ ಡಿಕೆಶಿ ತಿಹಾರ್ ಜೈಲಿನಿಂದ ಹೊರಬರುತ್ತಿದ್ದಂತೆ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಡಿಕೆಶಿ ಸಹೋದರ, ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ತಿಹಾರ್ ಜೈಲು ಮುಂದೆ ನೆರೆದಿದ್ದು, ಡಿ.ಕೆ.ಶಿವಕುಮಾರ್ ಜೈಲಿನಿಂದ ಹೊರ ಬರುತ್ತಿದ್ದಂತೆ ಜೈಕಾರ ಹಾಕಿ, ಭಾರೀ ಹಾರಗಳನ್ನು ಹಾಕಿ ಸ್ವಾಗತಿಸಿದರು. ನಂತರ ಶಿವಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೆಹಲಿಯ ಮನೆಯಲ್ಲಿ ಅವರಿಗೆ ಆರತಿ ಎತ್ತಿ, ಮೊಟ್ಟೆ, ನಿಂಬೆಹಣ್ಣಿನ ದೃಷ್ಟಿ ತೆಗೆದು ಬರಮಾಡಿಕೊಳ್ಳಲಾಯಿತು.

ಕಳೆದ 50 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಶಿವಕುಮಾರ್ ಅವರಿಗೆ ಜಾಮೀನು ಕೊಡಿಸಲು ಸುಪ್ರೀಂ ಕೋರ್ಟ್‍ನ ಖ್ಯಾತ ವಕೀಲರು ವಾದ ಮಂಡಿಸಿದ್ದರು. ತೀರ್ಪು ಕಾಯ್ದಿರಿಸಿದ್ದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ನೇತೃತ್ವದ ನ್ಯಾಯಪೀಠ, ಇಂದು ಸಂಜೆ ಐದು ನಿಮಿಷಗಳಲ್ಲಿ ತೀರ್ಪು ಪ್ರಕಟಿಸಿ, ಜಾರಿ ನಿರ್ದೇಶನಾಲಯ ಈಗಾಗಲೇ ಸಾಕಷ್ಟು ಬಾರಿ ವಿಚಾರಣೆ ನಡೆಸಿದೆ. ಹಾಗಾಗಿ ನ್ಯಾಯಾಂಗ ಬಂಧನದ ಮುಂದುವರಿಕೆ ಅವಶ್ಯಕತೆ ಇಲ್ಲ ಎಂದು ಜಾಮೀನು ಮಂಜೂರು ಮಾಡಿತು. ಜತೆಗೆ ಮೂರು ಪ್ರಮುಖ ಷರತ್ತುಗಳನ್ನು ವಿಧಿಸಿತು.

ಆರೋಪಿ ಸಾಕ್ಷ್ಯ ನಾಶ ಮಾಡುತ್ತಾರೆ ಎಂಬುದಕ್ಕೆ ಯಾವುದೇ ಆಧಾರ ಕಂಡುಬರುತ್ತಿಲ್ಲ, ವಿದೇಶಕ್ಕೆ ಪಲಾಯನ ಮಾಡುವ ಸಾಧ್ಯತೆಯೂ ಇಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಜಾರಿ ನಿರ್ದೇಶನಾಲಯ ತನಿಖೆಗೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದಾಗಲೆಲ್ಲಾ ಹಾಜರಾಗಬೇಕು, ವಿದೇಶಕ್ಕೆ ತೆರಳಬೇಕೆಂದರೆ ನ್ಯಾಯಾಲಯದ ಅನುಮತಿ ಪಡೆಯಬೇಕು, ಮುಂದಿನ ಆದೇಶದವರೆಗೆ ಪಾಸ್ ಪೋರ್ಟ್ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಯಪೀಠ ಆದೇಶಿಸಿದೆ.

ಪಾಸ್‍ಪೋರ್ಟ್ ಒಪ್ಪಿಸಬೇಕು. 25 ಲಕ್ಷ ರೂ. ಮೌಲ್ಯದ ಬಾಂಡ್ ಸಲ್ಲಿಸಬೇಕು ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯ ಬಿಡುಗಡೆ ಭಾಗ್ಯ ನೀಡಿತು. ಆ ಮೂಲಕ ಶಿವಕುಮಾರ್‍ಗೆ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಲು ಅವಕಾಶ ಸಿಗುವಂತಾಯಿತು.

ಶಿವಕುಮಾರ್ ಅವರಿಗೆ ಹವಾಲ ಪ್ರಕರಣದಿಂದ ಸ್ವಲ್ಪ ಮುಕ್ತಿ ದೊರೆತಿದ್ದರೂ, ಅವರು ಸಚಿವರಾಗಿದ್ದಾಗ ಇಂಧನ ಖರೀದಿ ಹಾಗೂ ಬಳ್ಳಾರಿಯ ಸೋಲಾರ್ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಅಕ್ರಮ ಎಸಗಿದ ಆರೋಪ ಇದ್ದು, ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸಿಬಿಐ ಅನ್ನು ಜಾರಿ ನಿರ್ದೇಶನಾಲಯ ಕೋರಿದೆ. ಈ ಕೋರಿಕೆ ಮೇರೆಗೆ ಸಿಬಿಐ ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿದ್ದು, ಶಿವಕುಮಾರ್ ಅವರನ್ನು ಯಾವುದೇ ಸಂದರ್ಭದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಬಹುದಾಗಿದೆ.

ಜಾರಿ ನಿರ್ದೇಶನಾಲಯದ (ಇ.ಡಿ) ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ದೆಹಲಿ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಕಳೆದ ವಾರ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.

ಶಿವಕುಮಾರ್ ಬಂಧಮುಕ್ತರಾಗಲಿರುವ ಬೆನ್ನಲ್ಲೇ ರಾಜ್ಯದಲ್ಲಿ ಅವರ ಬೆಂಬಲಿಗರು ವಿಜಯೋತ್ಸವ ಆಚರಣೆಯ ಉತ್ಸಾಹದಲ್ಲಿದ್ದಾರೆ. ಶಿವಕುಮಾರ್ ಅವರ ಪತ್ನಿ, ಪುತ್ರಿ ಸೇರಿದಂತೆ ಕುಟುಂಬದ ಸದಸ್ಯರು ಕನಕಪುರಕ್ಕೆ ಧಾವಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಶಿವಕುಮಾರ್ ಅವರಿಗೆ ಜಾಮೀನು ನೀಡಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸುತ್ತಿದ್ದಂತೆಯೇ ಹರ್ಷಚಿತ್ತರಾದ ಅವರ ಸಹೋದರ, ಸಂಸದ ಡಿ.ಕೆ.ಸುರೇಶ್, ನ್ಯಾಯಾಲಯದ ಆವರಣದಲ್ಲೇ ವಕೀಲರನ್ನು ತಬ್ಬಿಕೊಂಡು ಹರ್ಷ ವ್ಯಕ್ತಪಡಿಸಿದರು.

ಕಳೆದ ತಿಂಗಳ ಆರಂಭದಲ್ಲಿ ಇ.ಡಿ. ವಿಚಾರಣೆ ಎದುರಿಸಲು ದೆಹಲಿಗೆ ಹೋದ ಶಿವಕುಮಾರ್ ಅವರನ್ನು ಬಂಧಿಸಲಾಗಿತ್ತಲ್ಲದೆ 10 ದಿನಗಳ ಕಾಲ ಇ.ಡಿ. ಸೆಲ್‍ನಲ್ಲಿಯೇ ಇರಿಸಿ ವಿಚಾರಣೆ ನಡೆಸಲಾಗಿತ್ತು. ನಂತರ ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನದ ಕೋರ್ಟ್ ಆದೇಶದ ಮೇರೆಗೆ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತಲ್ಲದೆ, ಅಲ್ಲಿಯೂ ಅವರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಕೂಡಾ ಶಿವಕುಮಾರ್ ಪರ ವಕೀಲರು ಸಲ್ಲಿಸುತ್ತಿದ್ದ ಜಾಮೀನು ಅರ್ಜಿಯನ್ನು ನಿರಂತರವಾಗಿ ವಜಾ ಮಾಡುತ್ತಲೇ ಬಂದಿತ್ತು. ಈ ಮಧ್ಯೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಥೈರಾಯಿಡ್ ಸಮಸ್ಯೆಯಿಂದ ಬಳಲತೊಡಗಿದ ಶಿವಕುಮಾರ್ ಅವರನ್ನು ಬಂಧಮುಕ್ತಗೊಳಿಸುವಂತೆ ಕೋರುತ್ತಿದ್ದ ವಕೀಲರು, ಅರ್ಜಿದಾರರು ತಮ್ಮ ಪರ ಯಾವ ಸಾಕ್ಷಿಗಳನ್ನೂ ನಾಶ ಮಾಡಿಲ್ಲ, ಆರ್ಥಿಕ ಜಾರಿ ನಿರ್ದೇಶನಾಲಯ ಕೋರಿದ ಸಾಕ್ಷಿಗಳನ್ನು ಕೊಟ್ಟಿದ್ದಾರೆ, ಇನ್ನಷ್ಟು ಸಾಕ್ಷಿಗಳ ಅಗತ್ಯವಿದೆಯೆಂದಾದರೆ ಅದನ್ನು ಕೊಡಲೂ ಸಿದ್ಧರಿದ್ದಾರೆ ಎಂದು ನ್ಯಾಯ ಪೀಠಕ್ಕೆ ಅರಿಕೆ ಮಾಡಿದ್ದರು.

ಆರ್ಥಿಕ ಜಾರಿ ನಿರ್ದೇಶನಾಲಯ ಬಯಸಿದ ಕ್ಷಣದಲ್ಲಿ ವಿಚಾರಣೆಗೆ ಹಾಜರಾಗಲು ತಮ್ಮ ಪರ ಕಕ್ಷಿದಾರರು ಸಿದ್ಧರಿದ್ದಾರೆ, ಯಾವ ಕಾರಣಕ್ಕೂ ದೇಶದಿಂದ ಪಲಾಯನ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ವಕೀಲ ಅಭಿಷೇಕ್ ಮನು ಸಿಂಘ್ವಿ ವಿವರಿಸಿದ್ದರು. ಈ ಎಲ್ಲಾ ಅಂಶಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿ ಮೇಲಿನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.