ಅನರ್ಹತೆ ಭೀತಿ ಬೇಡ: ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅಭಯ

ಬೆಂಗಳೂರು, ಜು. 13- ವ್ಹಿಪ್ ಉಲ್ಲಂಘಿಸಿದರೆ ಶಾಸಕರನ್ನು ಅನರ್ಹಗೊಳಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‍ನಲ್ಲಿ ಅತೃಪ್ತ ಶಾಸಕರ ಪರ ವಾದ ಮಂಡಿಸುತ್ತಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅತೃಪ್ತ ಶಾಸಕರಿಗೆ ಅಭಯ ನೀಡಿದ್ದಾರೆ ಎನ್ನಲಾಗಿದೆ. ಬುಧ ವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ವಿಶ್ವಾಸ ಮತಯಾಚನೆ ಮಾಡುವ ಸಾಧ್ಯತೆ ಇದ್ದು, ಆ ಸಂದರ್ಭದಲ್ಲಿ ಸದನಕ್ಕೆ ಗೈರುಹಾಜರಾದರೆ ಅನರ್ಹತೆಗೆ ಒಳಗಾಗಬಹುದೇ ಎಂಬ ಆತಂಕದಲ್ಲಿರುವ ಅತೃಪ್ತ ಶಾಸಕರು ತಮ್ಮ ವಕೀಲರನ್ನು ಸಂಪರ್ಕಿಸಿದ್ದು, ವ್ಹಿಪ್ ಉಲ್ಲಂ ಘಿಸಿದರೆ ಅನರ್ಹಗೊಳಿಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್‍ನ ಆದೇಶದಂತೆ ಅನರ್ಹತೆ ಅರ್ಜಿ ಬಗ್ಗೆ ವಿಧಾನಸಭಾಧ್ಯಕ್ಷರು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರೆನ್ನಲಾಗಿದೆ.

ಇದೇ ವಿಚಾರವಾಗಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿ ಗಾರರ ಜೊತೆ ಮಾತನಾಡಿದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿ ಹೊಳಿ, ವಿಧಾನಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ತಾವು ಸೇರಿದಂತೆ 18 ಶಾಸಕರನ್ನು ಅಂದಿನ ವಿಧಾನಸಭಾಧ್ಯಕ್ಷರು ಅನರ್ಹಗೊಳಿಸಿದ್ದರು. ಆದರೆ, ಸುಪ್ರೀಂಕೋರ್ಟ್ ವಿಧಾನಸಭಾಧ್ಯಕ್ಷರ ಆದೇಶವನ್ನು ರದ್ದು ಗೊಳಿಸಿತ್ತು ಎಂಬುದನ್ನು ಉಲ್ಲೇಖಿಸಿದ ಅವರು, ಯಾವುದೇ ಶಾಸಕರು ಅನರ್ಹಗೊಳ್ಳಬಹುದು ಎಂದು ಹೆದರುವ ಅವಶ್ಯಕತೆ ಇಲ್ಲ ಎಂದರು.