ಕುಡಿಯುವ ನೀರು ಸ್ವಚ್ಛತೆಗೆ ಹೆಚ್ಚು ಆದ್ಯತೆ

ವಿರಾಜಪೇಟೆ:  ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಬೀದಿ ದೀಪ, ಸಾರ್ವಜನಿಕರಿಗೆ ಕುಡಿಯುವ ನೀರು, ಚರಂಡಿ ಮತ್ತು ಸ್ವಚ್ಚತೆಯ ಬಗ್ಗೆ ಹೆಚ್ಚು ಒತ್ತು ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಹೇಳಿದರು.

ವಿರಾಜಪೇಟೆ ಪಟ್ಟಣದ ಅನೇಕ ವಾರ್ಡ್‍ಗಳಿಗೆ ಅಲ್ಲಿನ ಸದಸ್ಯರುಗಳೊಂದಿಗೆ ಬೇಟಿ ನೀಡಿ ವೀಕ್ಷಣೆ ನಡೆಸಿದ ನಂತರ ಅರಸು ನಗರಕ್ಕೆ ಅಲ್ಲಿನ ಸದಸ್ಯ ರಂಜಿ ಪೂಣಚ್ಚ ಅವರೊಂದಿಗೆ ಬೇಟಿ ನೀಡಿದ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಬೆಟ್ಟ ಪ್ರದೇಶವಾದ ಅರಸು ನಗರ ಮತ್ತು ಇತರ ಕಡೆಗಳಲ್ಲಿ ಕಾಲು ದಾರಿಗಳನ್ನು ದುರಸ್ತಿ ಪಡಿಸುವುದು ಮತ್ತು ಮೆಟ್ಟಿಲುಗಳ ನಿರ್ಮಾಣ ಹಾಗೂ ಚರಂಡಿ ಕಾಮ ಗಾರಿಗಳನ್ನು ತುರ್ತಾಗಿ ಮಳೆ ಹಾನಿ ಪರಿಹಾರದ ಅನುದಾನದಲ್ಲಿ ಕಾಮಗಾರಿ ನಡೆಸಲಾಗುವುದು. ಅದೇ ರೀತಿ ಗುಂಡಿಗಳಾಗಿರುವ ಎಲ್ಲಾ ರಸ್ತೆಗಳನ್ನು ಗುಂಡಿ ಮುಚ್ಚುವ ಕಾರ್ಯವನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಮುಂದೆ ಅನುದಾನ ಬಂದ ನಂತರ ಎಲ್ಲಾ ಕಾಮಗಾರಿಗಳನ್ನು ಮಾಡಲಾಗುವುದು ಎಂದರು. ಈ ಸಂದರ್ಭ ಸದಸ್ಯ ರಂಜಿ ಪೂಣಚ್ಚ ಮಾತನಾಡಿ, ಇಲ್ಲಿನ ನಿವಾಸಿಗಳು ಅನೇಕ ವರ್ಷಗಳಿಂದಲೂ ಬೆಟ್ಟ ಪ್ರದೇಶದಲ್ಲಿ ವಾಸವಿದ್ದು ಇವರಿಗೆ ಹಕ್ಕುಪತ್ರ ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದರು. ಭೇಟಿ ಸಂದರ್ಭ ಪಂಚಾಯಿತಿ ಅಭಿಯಂತರ ಎನ್.ಪಿ.ಹೇಮಕುಮಾರ್, ಸೋಮೇಶ್ ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.