ಹುಲಿ ಸೆರೆ ಕಾರ್ಯಾಚರಣೆಗೆ ಡ್ರೋನ್ ಬಳಕೆ

ಹುಣಸೂರು:  ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹನಗೋಡು ಬಳಿಯ ಕೆ.ಜಿ.ಹಬ್ಬನ ಕುಪ್ಪೆಯಲ್ಲಿ ಜಾನು ವಾರುಗಳನ್ನು ಬಲಿ ತೆಗೆದುಕೊಂಡು ಆತಂಕ ಹುಟ್ಟಿಸಿದ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದೆ.

ಕಳೆದೊಂದು ವಾರದಿಂದೀಚೆಗೆ ಕೆ.ಜಿ. ಹಬ್ಬನಕುಪ್ಪೆಯ ತರಗನ್ ಎಸ್ಟೇಟ್‍ನಲ್ಲಿ ಹುಲಿ ಕಾಣಿಸಿಕೊಂಡಿರುವುದಲ್ಲದೆ, ಈಗಾಗಲೇ ಎರಡು ಜಾನುವಾರುಗಳನ್ನು ತಿಂದು ಹಾಕಿದೆ, ಮತ್ತೆರಡು ಜಾನುವಾರು ಗಳನ್ನು ಗಾಯಗೊಳಿಸಿದೆ. ಹುಲಿ ಹಸು ವೊಂದರ ಮೇಲೆ ದಾಳಿ ಮಾಡುತ್ತಿದ್ದನ್ನು ಕಣ್ಣಾರೆ ಕಂಡ ಗ್ರಾಮಸ್ಥರೊಬ್ಬರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿರುವ ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಆರ್.ರವಿಶಂಕರ್ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಸಾಕಾನೆಗಳ ಸಹಾಯದಿಂದ ಶುಕ್ರವಾರ ದಿಂದ ಹುಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಭೀಮ, ಗಣೇಶ, ದ್ರೋಣ ಅಭಿಮನ್ಯು, ಬಲರಾಮ, ಆನೆಗಳ ಸಹಾಯದಿಂದ ಪ್ರತ್ಯೇಕ ತಂಡ ರಚಿಸಿಕೊಂಡು ತರಗನ್ ಎಸ್ಪೇಟ್‍ನಲ್ಲಿ ಹುಲಿ ಪತ್ತೆಗೆ ಕೂಬಿಂಗ್ ನಡೆಯುತ್ತಿದೆ. ಈಗಾಗಲೇ ಹುಲಿಯು ಕಚುವಿನಹಳ್ಳಿಯ ಸಿದ್ದೇಗೌಡ, ನೇರಳಕುಪ್ಪೆ ರಾಮೇಗೌಡರಿಗೆ ಸೇರಿದ ಎರಡು ಜಾನುವಾರುಗಳನ್ನು ಕೊಂದು, ತಿಂದು ಹಾಕಿದ್ದರೆ, ಗುರುವಾರ ಕೆ.ಜಿ.ಹಬ್ಬನ ಕುಪ್ಪೆಯ ಜಿ.ಎಂ.ದೇವಯ್ಯ, ಚಂದ್ರ ಶೇಖರ್‍ರಿಗೆ ಸೇರಿದ ಜಾನುವಾರು ಗಳ ಮೇಲೆ ದಾಳಿ ನಡೆಸಿದ್ದು, ಜನರನ್ನು ಕಂಡು ಪರಾರಿಯಾಗಿದೆ.

ಸ್ಥಳದಲ್ಲಿ ಸಿ.ಎಫ್.ರವಿಶಂಕರ್, ವೈಲ್ಡ್ ಲೈಫ್ ವಾರ್ಡನ್ ಕೃತಿಕ, ಎನ್‍ಡಿಸಿಯು ರಾಜ ಕುಮಾರ್, ಎಸಿಎಫ್ ಪ್ರಸನ್ನಕುಮಾರ್, ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಆರ್‍ಎಫ್‍ಓ ಸುರೇಂದ್ರರವರು ಚರ್ಚಿಸಿ ಕಾರ್ಯಾಚರಣೆಯ ರೂಪು-ರೇಷೆ ರೂಪಿಸಿ ಶುಕ್ರವಾರ ಮಧ್ಯಾಹ್ನದಿಂದ ಕಾರ್ಯಾಚರಣೆ ಆರಂಭಿಸಲಾಗಿದೆ.

ಅತ್ಯಾಧುನಿಕ ಡ್ರೋನ್ ಕ್ಯಾಮರಾ ಬಳಿಸಿ ಹುಲಿಯನ್ನು ಪತ್ತೆ ಹಚ್ಚಿ ಕಾಡಿಗೆ ಅಟ್ಟುವ ಸಲುವಾಗಿ, ಬೆಂಗಳೂರಿನಿಂದ ಮಧು ಶಂಕರ್ ಹಾಗೂ ನುರಿತ ತಂಡ ಅಗಮಿಸಿ ಈ ಆಪರೇಷನ್‍ಗೆ ಕೈ ಜೋಡಿಸಿದ್ದು, ಇದರ ಫಲವಾಗಿ ನಾಲ್ಕೈದು ಬಾರಿ ಹುಲಿ ಕ್ಯಾಮರದಲ್ಲಿ ಗೋಚರಿಸಿದ್ದು, ಇದನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಅಂತಿಮ ಘಟ್ಟ ತಲುಪಿದ್ದು ಶೀಘ್ರದಲ್ಲಿ ಹುಲಿಯನ್ನು ಸುರಕ್ಷಿತವಾಗಿ ಕಾಡಿಗೆ ಕಳುಹಿಸುವುದಾಗಿ ಎಸಿಎಫ್ ಪ್ರಸನ್ನ ಕುಮಾರ್ ‘ಮೈಸುರುಮಿತ್ರ’ನಿಗೆ ತಿಳಿಸಿದ್ದಾರೆ.