ಮೈಸೂರು, ಜೂ.26(ಪಿಎಂ)- ಮಾದಕ ವ್ಯಸನದ ಹಾದಿ ಕಟ್ಟುವುದು ಬೇಗ ಸಮಾಧಿ… ಎಂಬಿತ್ಯಾದಿ ಘೋಷ ವಾಕ್ಯಗಳ ಫಲಕಗಳನ್ನಿಡಿದು ಹೆಜ್ಜೆ ಹಾಕಿದ ವಿದ್ಯಾರ್ಥಿ ಸಮೂಹ ಮಾದಕ ಪದಾರ್ಥಗಳು ವ್ಯಕ್ತಿಯ ಬದುಕಿಗೆ ಮಾರಕ ಎಂಬುದನ್ನು ಅನಾವರಣ ಗೊಳಿಸಿತು. ಮಾದಕ ಪದಾರ್ಥ ಬಳಕೆ ಮತ್ತು ಅಕ್ರಮ ಸಾಗಣೆ ವಿರೋಧಿ ಅಂತಾ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ಮಂಡಿ ಪೊಲೀಸ್ ಠಾಣೆ ಆಶ್ರಯದಲ್ಲಿ ಬುಧವಾರ ನಡೆದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಸಮೂಹ ಮಾದಕ ವಸ್ತು ಬಳಕೆಯ ಅನಾಹುತದ ಬಗ್ಗೆ ಸಂದೇಶ ಸಾರಿತು.
ವಿದ್ಯಾವರ್ಧಕ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾದಕ ವ್ಯಸನ ಬಿಡಿ, ಸುಖ ಜೀವನದತ್ತ ನಡಿ… ತಂಬಾಕು ಸೇವನೆ ಕ್ಯಾನ್ಸರ್‍ಗೆ ಮೂಲ… ಕುಡಿತದ ಜೀವನ ಕುಟುಂಬದ ಮರಣ… ಗುಟ್ಕಾ ತಿಂದ ಗೊಟಕ್ ಅಂದ… ಎಂಬುದು ಸೇರಿದಂತೆ ನಾನಾ ರೀತಿಯ ಘೋಷ ವಾಕ್ಯಗಳ ಫಲಕಗಳನ್ನಿಡಿದು ಜಾಗೃತಿ ಮೂಡಿಸಿದರು.
ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ವಿದ್ಯಾಸಂಸ್ಥೆಗಳ ಆವರಣದಲ್ಲಿ ಜಾಥಾಕ್ಕೆ ಎನ್‍ಆರ್ ಎಸಿಪಿ ಗೋಪಾಲ್ ಚಾಲನೆ ನೀಡಿದರು. ಸಯ್ಯಾಜಿರಾವ್ ರಸ್ತೆ, ಕಬೀರ್ ರಸ್ತೆ, ಮಂಡಿ ಮಾರುಕಟ್ಟೆ ರಸ್ತೆ, ಸಾಡೇ ರಸ್ತೆ, ಮಿಷನ್ ಆಸ್ಪತ್ರೆ ವೃತ್ತದಲ್ಲಿ ಸಂಚರಿಸಿದ ಜಾಥಾವು ಕಾಲೇಜು ಆವರಣಕ್ಕೆ ಹಿಂದಿರುಗಿ ಅಂತ್ಯಗೊಂಡಿತು. ಪಾಲಿಕೆ ಸದಸ್ಯ ರಮೇಶ್ (ರಮಣಿ), ಮಂಡಿ ಠಾಣೆ ಇನ್ಸ್‍ಪೆಕ್ಟರ್ ಅರುಣ್, ಠಾಣೆ ಸಿಬ್ಬಂದಿಗಳಾದ ಕೆ.ಬಿ.ಹರೀಶ್, ವಿಜೇಂದ್ರ ಸಿಂಗ್, ದೇವರಾಜು, ಬಸವರಾಜು, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಎಂ.ಎಸ್.ಉಮಾ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.