ದಸರಾ ಗಜಪಡೆಗೆ ನಿತ್ಯವೂ ರಸಗವಳ!

ಮೈಸೂರು,ಆ.16-ನಾಡಹಬ್ಬ ದಸರಾ ಮಹೋ ತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಗಜಪಡೆಗೆ ‘ಬಲ’ ನೀಡಲು ಅರಣ್ಯ ಇಲಾಖೆ, ಪೌಷ್ಠಿಕ ಆಹಾರ ನೀಡಲು ಆರಂಭಿಸಿದೆ.

ಎರಡು ವರ್ಷಗಳ ಬಳಿಕ ಜಂಬೂಸವಾರಿ ಮೆರ ವಣಿಗೆ ಈ ಬಾರಿ ಸಂಪ್ರದಾಯದಂತೆ ಬನ್ನಿಮಂಟ ಪದ ಪಂಜಿನ ಕವಾಯತು ಮೈದಾನದವರೆಗೆ ನಡೆಸಲು ಉದ್ದೇಶಿಸಲಾಗಿದ್ದು, ವೈಭವದ ದಸರಾ ಮಹೋತ್ಸವ ಆಚರಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಗಜಪಡೆಯನ್ನು ಸನ್ನದ್ದುಗೊಳಿ ಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆ ಹೊತ್ತಿದ್ದು, ಅದಕ್ಕಾಗಿ ಈಗಿನಿಂದಲೇ ಆನೆಗಳ ಶಕ್ತಿವರ್ಧನೆಗೆ ಪೌಷ್ಠಿಕ ಆಹಾರ ನೀಡುವ ಪ್ರಕ್ರಿಯೆ ಆರಂಭಿಸಲಾಗಿದೆ.
ಏನೇನು: ದಸರೆಗೆ ಆನೆಗಳಿಗೆ ಹಸಿರು ಕಾಳು, ಉದ್ದಿನ ಕಾಳು, ಕುಸುಬಲು ಅಕ್ಕಿ, ಗೋಧಿ ಬೇಯಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ,
ಈರುಳ್ಳಿ ಹಾಗೂ ವಿವಿಧ ತರಕಾರಿ ಕತ್ತರಿಸಿ ಬೆರೆಸಲಾಗುತ್ತದೆ. ಬಳಿಕ ಬೆಣ್ಣೆ ಸೇರಿಸಿ ಆನೆಗಳಿಗೆ ನೀಡಲಾಗುತ್ತಿದೆ. ಇದರೊಂದಿಗೆ ಒಂದೊಂದು ಆನೆಗೆ 300 ರಿಂದ 500 ಕೆಜಿ ಆಲ ಹಾಗೂ ಅರಳಿ ಸೊಪ್ಪನ್ನು ನೀಡಲಾಗುತ್ತಿದೆ. ಪೌಷ್ಠಿಕ ಆಹಾರವನ್ನು ದಿನಕ್ಕೆ ಎರಡು ಬಾರಿ ಎರಡು ಕೆ.ಜಿ.ಯಷ್ಟು ನೀಡಲಾಗುತ್ತಿದ್ದು, ಒಂದು ವಾರದ ನಂತರ 5 ಕೆ.ಜಿ.ಗೆ ಹೆಚ್ಚಿಸಲಾಗುವುದು. ಆರಂಭದಲ್ಲಿ ಪೌಷ್ಠಿಕ ಆಹಾರವನ್ನು ಹೆಚ್ಚಾಗಿ ತಿಂದರೆ ಆನೆಗಳಿಗೆ ಭೇದಿಯಾಗುವ ಸಂಭವ ಹೆಚ್ಚಾಗಿರುವುದರಿಂದ ಒಂದೊಂದು ಆನೆಗೆ ತಲಾ 2 ಕೆಜಿ ಪೌಷ್ಠಿಕ ಆಹಾರದ ಉಂಡೆ ನೀಡಲಾಗುತ್ತಿದೆ. ಈಗಾಗಲೇ ಪೌಷ್ಠಿಕ ಆಹಾ ರಕ್ಕೆ ಹೊಂದಿಕೊಂಡಿರುವ ಆನೆಗಳಿಗೆ ಜೀರ್ಣ ಪ್ರಕ್ರಿಯೆಯೂ ಉತ್ತಮವಾಗಿರುವುದರಿಂದ ಹಂತ ಹಂತವಾಗಿ ಪೌಷ್ಠಿಕ ಆಹಾರದ ಪ್ರಮಾಣ ಹೆಚ್ಚಿಸಲಾಗುತ್ತದೆ. ಇನ್ನೊಂದು ವಾರದಲ್ಲಿ ಒಂದೊಂದು ಆನೆಗೆ 5 ಕೆಜಿವರೆಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಪ್ರತಿದಿನ ಮುಂಜಾನೆ 4.30ಕ್ಕೆ ಒಮ್ಮೆ ಹಾಗೂ ಸಂಜೆ 7 ಗಂಟೆಗೆ ಮತ್ತೊಮ್ಮೆ ಕಾಳು ಹಾಗೂ ತರಕಾರಿಯಿಂದ ತಯಾರಿಸಿರುವ ಪೌಷ್ಠಿಕ ಆಹಾರ ನೀಡಲಾಗುತ್ತದೆ.

ಕುಸುರೆ: ಪೌಷ್ಠಿಕ ಆಹಾರದೊಂದಿಗೆ ಆನೆಗಳಿಗೆ ಭತ್ತ, ಉಪ್ಪು, ಬೆಲ್ಲ, ತೆಂಗಿನಕಾಯಿ ಮಿಶ್ರಣ ಮಾಡಿ ಭತ್ತದ ಹುಲ್ಲಿನಲ್ಲಿ ಉಂಡೆ(ಕುಸುರೆ) ಕಟ್ಟಿ ಆನೆಗಳಿಗೆ ತಿನ್ನಿಸುವ ಪ್ರಕ್ರಿಯನ್ನು ಆರಂಭಿಸಲಾಗಿದೆ. ಇದರಿಂದ ದಸರಾ ಗಜಪಡೆಗೆ ಬೇಕಾಗುವ ಪೌಷ್ಠಿಕಾಂಶವನ್ನು ಆಹಾರ ಪದಾರ್ಥಗಳ ಮೂಲಕ ನೀಡಿ ಜಂಬೂಸವಾರಿಗೆ ಸಜ್ಜುಗೊಳಿಸಲಾಗುತ್ತದೆ.

ಈ ಸಾಲಿನ ದಸರಾ ಮಹೋತ್ಸವ ಸೆ.26ರಂದು ಆರಂಭವಾಗಿ ಅ.5 ಜಂಬೂ ಸವಾರಿಯ ಮೂಲಕ ಸಮಾಪ್ತಿಗೊಳ್ಳಲಿದೆ. ಈ ಸಾಲಿನ ದಸರಾ ಮಹೋತ್ಸವದಲ್ಲಿ 14 ಆನೆಗಳು ಪಾಲ್ಗೊಳ್ಳಲಿವೆ. ಆ.7ರಂದು ವಿವಿಧ ಕ್ಯಾಂಪ್‍ಗಳಿಂದ ಮೊದಲ ತಂಡದಲ್ಲಿ 9 ಆನೆಗಳನ್ನು ಮೈಸೂರಿಗೆ ಕರೆತರಲಾಗಿದೆ. ಆ.10ರಂದು ಮೈಸೂರು ಅರಮನೆ ಆವರಣಕ್ಕೆ ಕಾಲಿಟ್ಟಿದ್ದ ಗಜಪಡೆಗೆ ಇದೀಗ ಪೌಷ್ಠಿಕ ಆಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ.