ಮೈಸೂರು: ಕೇವಲ 70 ಪೈಸೆಗೆ ನಗರ ಪಾಲಿಕೆ ಅಧಿಕಾರಿಗಳು 1500 ರೂ. ದಂಡ ತೆರಬೇಕಾಗಿ ಬಂದಿದೆ.
ಮೈಸೂರಿನ ರಾಮಕೃಷ್ಣನಗರ ಹೆಚ್-ಬ್ಲಾಕ್ ನಿವಾಸಿ ಎಸ್.ಸತೀಶ್ ಅವರಿಗೆ ನೀಡಿದ ನೀರಿನ ಬಿಲ್‍ನಲ್ಲಿ ಬಾಕಿ 30 ಪೈಸೆ ಬದಲು 70 ಪೈಸೆ ಹೆಚ್ಚುವರಿಯಾಗಿ 1 ರೂ. ಬಾಕಿ ಎಂದು ಬಿಲ್ ನೀಡಲಾಗಿದೆ. ನಗರ ಪಾಲಿಕೆ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ. ಇದರಿಂದಾಗಿ ತನಗೆ ಮಾನಸಿಕ ಆಘಾತವುಂಟಾಗಿದ್ದು, 2 ಲಕ್ಷ ರೂ. ಪರಿಹಾರ ಕಲ್ಪಿಸಿಕೊಡ ಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗೆ ನಗರ ಪಾಲಿಕೆ ಆಯುಕ್ತರು ಮತ್ತು ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರದ ಎಗ್ಸಿಕ್ಯೂಟಿವ್ ಇಂಜಿನಿಯರ್ ಅವ ರನ್ನು ಪ್ರತಿವಾದಿಗಳಾಗಿ ನಮೂದಿಸಿ 2018ರ ಆಗಸ್ಟ್ 4ರಂದು ದೂರು ಸಲ್ಲಿಸಿದ್ದರು.
ಪ್ರತಿವಾದಿಗಳಿಗೆ 2018ರ ಆಗಸ್ಟ್ 7ರಂದು ನೋಟೀಸ್ ಜಾರಿ ಮಾಡಿದ್ದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿ ಕೆಯು ಉಭಯ ಪಾರ್ಟಿಗಳ ಲಿಖಿತ ವಿವರಣೆ ಪಡೆದು, ಇದೇ ಫೆ.28ರಂದು ತೀರ್ಪು ನೀಡಿದ್ದು, ಪಾಲಿಕೆ ಅಧಿಕಾರಿ ಗಳು ಕರ್ತವ್ಯ ಲೋಪವೆಸಗಿದ್ದಾರೆ. ಹಾಗಾಗಿ ಅರ್ಜಿದಾರರಾದ ಎಸ್.ಸತೀಶ್ ಅವರಿಗೆ 1 ಸಾವಿರ ರೂ. ಪರಿಹಾರ ವಾಗಿಯೂ, 500 ರೂ. ವ್ಯಾಜ್ಯದ ವೆಚ್ಚ ವಾಗಿಯೂ 45 ದಿನಗಳ ಒಳಗಾಗಿ ಅವರು ಅರ್ಜಿ ಸಲ್ಲಿಸಿದ ದಿನದಿಂದ ವಾರ್ಷಿಕ ಶೇ.12ರಷ್ಟು ಬಡ್ಡಿ ಸಮೇತ ಪಾವತಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಹೆಚ್.ಎಂ.ಶಿವಕುಮಾರಸ್ವಾಮಿ ಮತ್ತು ಸದಸ್ಯ ಎಂ.ಸಿ.ದೇವಕುಮಾರ್ ಆದೇಶ ನೀಡಿದ್ದಾರೆ.
ವಿವರ: ಸತೀಶ್ ಅವರಿಗೆ 2018ರ ಜೂನ್ 17ರಂದು ನೀರಿನ ಬಿಲ್ 340.30 ರೂ. ನೀಡಲಾಗಿತ್ತು. ಅವರು 340 ರೂ. ಪಾವತಿಸಿದ್ದರು. ಅಂದರೆ ಅವರ ನೀರಿನ ಬಿಲ್ ಬಾಕಿ 30 ಪೈಸೆ ಉಳಿದಿತ್ತು. ಆದರೆ 2018ರ ಜುಲೈ 17ರಂದು ಅವರಿಗೆ 341 ರೂ. ನೀರಿನ ಬಿಲ್ ಬಂದಿತ್ತು. ಅದರಲ್ಲಿ 1 ರೂ. ಬಾಕಿ ಎಂದು ನಮೂದಿಸ ಲಾಗಿತ್ತು. ಈ ಹಿನ್ನೆಲೆಯಲ್ಲಿ ಸತೀಶ್ ಅವರು ತಾನು 30 ಪೈಸೆಯಷ್ಟೇ ಬಾಕಿದಾರ ನಾಗಿದ್ದು, ಅಧಿಕಾರಿಗಳು ಅದನ್ನು 1 ರೂ. ಎಂದು ನಮೂದಿಸುವ ಮೂಲಕ 70 ಪೈಸೆ ಹೆಚ್ಚುವರಿಯಾಗಿ ಬಿಲ್‍ನಲ್ಲಿ ತೋರಿಸಿದ್ದಾರೆ. ಇದರಿಂದ ತನಗೆ ಮಾನಸಿಕ ಆಘಾತವುಂಟಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು.