ಮುಂಜಾನೆ ಎಎಸ್ಪಿ ದಾಳಿ: ಮರಳು ಲಾರಿ ವಶ

ಮೈಸೂರು, ಫೆ.20(ಆರ್‍ಕೆ)-ಅಕ್ರಮವಾಗಿ ಮರಳು ಸಾಗಿಸು ತ್ತಿದ್ದ ಲಾರಿಯನ್ನು ಬನ್ನೂರು ರಸ್ತೆಯ ವಾಜಮಂಗಲ ಗೇಟ್ ಬಳಿ ಮೈಸೂರಿನ ಅಡಿಷನಲ್ ಎಸ್ಪಿ ಶಿವಕುಮಾರ್ ಇಂದು ಮುಂಜಾನೆ ವಶಪಡಿಸಿಕೊಂಡಿದ್ದಾರೆ. ಬನ್ನೂರು ಕಡೆಯಿಂದ ನಿತ್ಯ ಮರಳು ಸಾಗಿಸುತ್ತಿದ್ದು, ಪೊಲೀಸರು ಸಹಕರಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿತ್ತು. ಸಾರ್ವಜನಿಕರು ನೀಡಿದ ಮಾಹಿತಿ ಆಧರಿಸಿ ಕಾನ್‍ಸ್ಟೇಬಲ್‍ಗಳಾದ ಶ್ರೀನಿವಾಸ ಮತ್ತು ದೀಪು ಅವರೊಂದಿಗೆ ಮಫ್ತಿಯಲ್ಲಿ ದಾಳಿ ನಡೆಸಿದಾಗ ಮುಂಜಾನೆ ಸುಮಾರು 4 ಗಂಟೆ ವೇಳೆ ಬನ್ನೂರು ಕಡೆಯಿಂದ ಮರಳು ತುಂಬಿಕೊಂಡು ಬರುತ್ತಿದ್ದ ಲಾರಿಯನ್ನು ವಾಜಮಂಗಲ ಬಳಿ ತಡೆದಾಗ ಅದರ ಚಾಲಕ ಜಿಗಿದು ಪರಾರಿಯಾದ ಎಂದು ಶಿವಕುಮಾರ್ ತಿಳಿಸಿದ್ದಾರೆ.

ಬನ್ನೂರು ತಾಲೂಕಿನ ಬಿದರಳ್ಳಹುಂಡಿ ಗ್ರಾಮದ ಕಾವೇರಿ ನದಿ ಪಾತ್ರದಲ್ಲಿ ಮರಳು ತುಂಬಿಕೊಂಡು ಮೈಸೂರಿಗೆ ಸಾಗಿಸಲಾಗು ತ್ತಿತ್ತು ಎಂಬ ಮಾಹಿತಿ ಲಭ್ಯ ವಾಗಿದ್ದು, ಮರಳು ತುಂಬಿದ್ದ ಲಾರಿ (ಕೆಎ 21-ಎ 1985) ಯನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದರು. ಲಾರಿಯು ಶ್ರೀರಂಗ ಪಟ್ಟಣ ತಾಲೂಕಿನ ದೊಡ್ಡ ಪಾಳ್ಯದ ಲೋಕೇಶ್ ಎಂಬುವ ರಿಗೆ ಸೇರಿದ್ದಾಗಿದೆ ಎಂದು ಹೇಳ ಲಾಗಿದೆಯಾದರೂ, ತನಿಖೆಯಿಂದ ದೃಢಪಡಬೇಕಾಗಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಚಾಲಕನ ಪತ್ತೆಗೆ ಶೋಧ ನಡೆಯುತ್ತಿದೆ ಎಂದು ಎಎಸ್ಪಿ ಶಿವಕುಮಾರ್ ತಿಳಿಸಿದರು.