ಹಾಸನದಲ್ಲಿ ಮುಂಜಾನೆ ಸುತ್ತಾಡಿ ಕಾಡಿಗೆ ಮರಳಿದ ಒಂಟಿ ಸಲಗ

ಹಾಸನ: ಆಹಾರದ ಆಸೆಯಿಂದ ಈವರೆಗೆ ಕಾಡಂಚಿನ ಗ್ರಾಮಗಳಲ್ಲಿ, ಕೃಷಿ ಭೂಮಿಯಲ್ಲಷ್ಟೇ ಕಾಣಿಸಿ ಕೊಳ್ಳುತ್ತಿದ್ದ ಕಾಡಾನೆಗಳು ಈಗ ನಗರ ಪ್ರದೇಶಕ್ಕೂ ಕಾಲಿಡಲಾರಂಭಿಸಿವೆ. ಇದು ನಗರದ ನಾಗರಿಕರಲ್ಲಿ ಆತಂಕ ಮೂಡಲು ಕಾರಣವಾಗಿದೆ.

ಮಂಗಳವಾರ ಮುಂಜಾನೆ ಹಾಸನ ನಗರದೊಳಗೆ ಬಂದ ಕಾಡಾನೆ, ರಸ್ತೆಗಳಲ್ಲಿ ಅತ್ತಿತ್ತ ಸಂಚರಿಸಿ ಆತಂಕದ ವಾತಾವರಣ ಸೃಷ್ಟಿಸಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಒಂಟಿ ಸಲಗವನ್ನು ಮರಳಿ ಕಾಡಿಗೆ ಓಡಿಸುವಲ್ಲಿ ಯಶಸ್ವಿಯಾದರು.

ಏಕಾಂಗಿ ಕಾಡಾನೆ ನಸುಕಿನ 4 ಗಂಟೆ ವೇಳೆ ನಗರದ ಪಿ ಅಂಡ್ ಟಿ ಕಾಲೋನಿಗೆ ಕಾಲಿಟ್ಟಿತು. ಆನೆಯ ಓಡಾಟದಿಂದ ಎಚ್ಚರ ಗೊಂಡ ಬಡಾವಣೆ ನಿವಾಸಿಗಳು ತಕ್ಷ ಣವೇ ಪೊಲೀಸ್ ಮತ್ತು ಅರಣ್ಯ ಇಲಾ ಖೆಗೆ ಕರೆ ಮಾಡಿ ಮಾಹಿತಿ ನೀಡಿದರು.

ಸ್ಥಳಕ್ಕೆ ಡಿಸಿಎಫ್ ಶಿವರಾಂ ಬಾಬು, ಎಸಿಎಫ್ ಹರೀಶ್, ಆರ್‍ಎಫ್‍ಓ ಜಗದೀಶ್ ತಂಡದೊಡನೆಗೆ ಬಡಾವಣೆಗೆ ಬರುವಷ್ಟ ರಲ್ಲಿ ಆನೆ ಜಾಗ ಖಾಲಿ ಮಾಡಿತ್ತು. ಹಳೆ ಹಾಸನ ನಗರದ ಭಾಗದಲ್ಲಿ ಜನರು ವಾಯುವಿಹಾರಕ್ಕಾಗಿ ರಸ್ತೆಗಿಳಿಯುವ ವೇಳೆ ಆನೆ ನೋಡಿ ಆತಂಕಗೊಳ್ಳ ಬಹುದು ಎಂದೇ ಅಧಿಕಾರಿಗಳು ಆನೆಗಾಗಿ ಹುಡುಕಾಟ ಆರಂಭಿಸಿದರು. ಬಳಿಕ ನಗರದ ಹೊರ ವಲಯದಲ್ಲಿ ಪತ್ತೆಯಾದ ಆನೆ, ಹಾಸನ ತಾಲೂಕಿನ ಸೀಗೆಗುಡ್ಡ ಅರಣ್ಯದತ್ತ ಹೋಯಿತು. ತನ್ನನ್ನು ಬೆನ್ನಟ್ಟಿ ಬಂದ ಅರಣ್ಯಾ ಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕಂಡು ಬೆದರಿದ ಸಲಗ, ಉದ್ದೂರು, ಶಂಖ, ಅತ್ತಿಹಳ್ಳಿ, ಜಿನ್ನೇನಹಳ್ಳಿ, ಇಬ್ದಾಣೆ ಮೂಲಕ ಕಾಡು ಸೇರಿಕೊಂಡಿತು.

ಕಳೆದ 15 ದಿನಗಳಲ್ಲಿ ಇದು 2ನೇ ಬಾರಿ ಕಾಡಾನೆ ನಗರಕ್ಕೆ ನುಗ್ಗಿದೆ. ಇದರಿಂದ ಆತಂಕಗೊಂಡಿರುವ ನಗರದ ಜನರು ಒಂಟಿ ಸಲಗವನ್ನು ಸೆರೆ ಹಿಡಿದು ಸ್ಥಳಾಂತರಿಸುವಂತೆ ಒತ್ತಾಯಿಸುತ್ತಿದ್ದಾರೆ.