ಬಜೆಟ್ ಅಧಿವೇಶನದ ಮಧ್ಯೆಯೇ ಇ.ಡಿ.ಯಿಂದ ವಿಚಾರಣೆಗೆ ಬುಲಾವ್

ಇಕ್ಕಟ್ಟಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಉಳಿಸಲು ಶಾಸಕರ ನಂಬರ್ ಗೇಮ್‍ನಲ್ಲಿ ತೊಡಗಿದ್ದರೆ, ಇತ್ತ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹಣ ವರ್ಗಾವಣೆಗೆ ಸಂಬಂಧಪಟ್ಟಂತೆ ದೆಹಲಿಯ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಬುಲಾವ್ ಬಂದಿದೆ.

ಕಾಂಗ್ರೆಸ್‍ನಲ್ಲಿ ಏನೇ ತೊಂದರೆ ಬಂದರೂ ಬಗೆಹರಿಸಲು ಮುಂದಾಗುವ ಟ್ರಬಲ್‍ಶೂಟರ್ ಎಂದೇ ಕರೆಸಿಕೊಳ್ಳುವ ಡಿ.ಕೆ.ಶಿವಕುಮಾರ್ ಈ ಬಾರಿ ಇಡಿ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗ ಬೇಕಿರುವುದರಿಂದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸುತ್ತಿರುವ ಬಜೆಟ್‍ನಲ್ಲಿ ಭಾಗವಹಿಸುವುದು ಅನುಮಾನ.

ಕಳೆದ ಮೇ ತಿಂಗಳಲ್ಲಿ ಯಡಿಯೂರಪ್ಪ ನವರು ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದ್ದ ಸಂದರ್ಭದಲ್ಲಿ ಶಿವಕುಮಾರ್ ಅವರೇ ಅಂದು ಬಂಡಾಯ ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಮೊದಲಾದವರನ್ನು ಕಾಂಗ್ರೆಸ್‍ನಿಂದ ಸದನಕ್ಕೆ ಕರೆಸಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಬಜೆಟ್ ಅಧಿವೇಶನ ಆರಂಭವಾಗಿದೆ ಎಂದು ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯದಿಂದ ವಿನಾಯ್ತಿ ಪಡೆಯುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರದ ಸಚಿವರಾಗಿ ಅವರು ಸದನದಲ್ಲಿ ಇರಬೇಕಾಗುತ್ತದೆ ಎನ್ನುತ್ತಾರೆ ಡಿಕೆಶಿಯವರ ಆಪ್ತರೊಬ್ಬರು. ಅಕ್ರಮ ಆಸ್ತಿ ಪ್ರಕರಣದಲ್ಲಿ ಶಿವಕುಮಾರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.