ಮೈಸೂರು: ಶಿಕ್ಷಣ ವ್ಯಕ್ತಿತ್ವ ವಿಕಸನಕ್ಕೆ ದಾರಿಯೇ ಹೊರತು ಉದ್ಯೋಗದ ಮಾರ್ಗವಲ್ಲ ಎಂದು ಸಮಾಜ ಸೇವಕಿ ವೀಣಾ ಶಿವಮೂರ್ತಿ ತಿಳಿಸಿದರು.
ಶ್ರೀರಾಮದೇವರಕಟ್ಟೆ ಸಮೀಪ ಆಯೋಜಿಸಲಾಗಿದ್ದ 1987-88ರ ಸಾಲಿನಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಳ್ಳಿ ಮೈಸೂರಿನಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಸ್ನೇಹ ಸಂಗಮ’ ಹಾಗೂ ‘ಗುರುವಂದನಾ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಅನೇಕ ಆಸೆ ಆಕಾಂಕ್ಷೆಗಳು ಇರುತ್ತದೆಯಾದರೂ ಪರಿಸ್ಥಿತಿಗನುಗುಣವಾಗಿ ಜೀವನದ ಗತಿ ಬದಲಾಗುತ್ತಾ ಹೋಗುತ್ತದೆ. ಆದರೆ ಅಂತಿಮವಾಗಿ ನಾವು ತಲುಪುವ ಗುರಿ ಮುಖ್ಯವಾಗುತ್ತದೆ. ಸಮಾಜದ ಯಾವುದೇ ವೃತ್ತಿಯನ್ನು ಜೀವನಕ್ಕಾಗಿ ಅವಲಂಬಿ ಸಿದರೂ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುವುದು ಮುಖ್ಯ ಎಂದು ವಿವರಿಸಿದರು.
ಶಿಕ್ಷಕ ಟಿ.ಎಸ್.ಶ್ರೀಧರ್ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುರುವೇ ಮಾರ್ಗದರ್ಶಕರು. ಅವರು ತೋರಿಸಿದ ಹಾದಿಯಲ್ಲಿ ನಡೆದ ನಾವು ಒಂದು ವ್ಯಕ್ತಿತ್ವವನ್ನು ಸಮಾಜದಲ್ಲಿ ರೂಪಿಸಿಕೊಂಡಿದ್ದರೆ ಅದಕ್ಕೆ ಗುರುಗಳ ಕಾಣಿಕೆ ಮಹತ್ವದ್ದು ಎಂದರು.
ಎಲ್.ಐ.ಸಿ. ಪ್ರತಿನಿಧಿ ಹೆಚ್.ಪಿ.ಶ್ರೀಧರ್ ಮಾತನಾಡಿ, 34 ವರ್ಷಗಳ ಹಿಂದೆ ಒಟ್ಟಿಗೆ ಪ್ರೌಢಶಾಲೆಗೆ ಸೇರಿದ ವಿದ್ಯಾರ್ಥಿಗಳನ್ನೆಲ್ಲ ಒಟ್ಟುಗೂಡಿಸಿ ಅವರ ಶಾಲಾ ಮತ್ತು ಜೀವನದ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಬದುಕಿನ ಮಾರ್ಗ ತೋರಿದ ಗುರುಗಳನ್ನು ಗುರುತಿಸಿ ಗೌರವಿಸುವ ಸಮಾರಂಭ ಇದಾಗಿದೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲೆಯ ಹಾಗೂ ಶಿಕ್ಷಕರೊಂದಿಗಿನ ಅನುಭವಗಳನ್ನು ಹಂಚಿಕೊಂಡಿದ್ದಲ್ಲದೆ ಆ ಸಂದರ್ಭದಲ್ಲಿ ಶಿಕ್ಷಕರಾಗಿದ್ದ ಪಿ.ಎಸ್. ಕೃಷ್ಣಮೂರ್ತಿ ಹಾಗೂ ಜಿ.ಬಿ. ಶಿವಣ್ಣ ಹಾಗೂ ಶ್ರೀಮತಿ ಪುಷ್ಪಲತಾ ಅವರನ್ನು ಸನ್ಮಾನಿಸಿ, ಗೌರವಿಸಿದರು.
ಶಿಕ್ಷಕರಾದ ಜಿ.ಬಿ. ಶಿವಣ್ಣ, ಲಲಿತ ನಂಜುಂಡ, ಲತಾ ಜಗದೀಶ, ವಿಜಯಲಕ್ಷ್ಮೀ, ವಿಶಾಲಿ ಎನ್.ಗೌಡ, ಪ್ರಭಾ ಮಣಿ, ರವಿಶಂಕರ್, ನಂಜುಂಡಶೆಟ್ಟಿ, ಮಾಲಿಂಗಸ್ವಾಮಿ, ಹೆಚ್.ಆರ್.ಮೋಹನ್, ಹೆಚ್.ಎಸ್.ರಘು, ಪ್ರಭು, ನಿಂಗೇಗೌಡ ಮುಂತಾದವರು ಭಾಗವಹಿಸಿದ್ದರು.