ಚಾಮರಾಜನಗರ-ಕೊಳ್ಳೇಗಾಲ ನಗರಸಭೆಗೆ ಚುನಾವಣೆ ನಿಗದಿ ಜಿಲ್ಲೆಯಲ್ಲಿ ಗರಿಗೆದರಿದ ಸ್ಥಳೀಯ ರಾಜಕೀಯ

ಚಾಮರಾಜನಗರ:  ರಾಜ್ಯ ಚುನಾ ವಣಾ ಆಯೋಗವು ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ನಿಗದಿಗೊಳಸುತ್ತಿದ್ದಂತೆಯೇ ಜಿಲ್ಲೆಯ ಸ್ಥಳೀಯ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇ ಗಾಲ ನಗರಸಭೆಗೆ ಇದೇ ತಿಂಗಳ 29ರಂದು ಚುನಾವಣೆ ನಡೆಯಲಿದೆ. ಈ ಎರಡೂ ನಗರಸಭೆಯ ತಲಾ 31 ಸ್ಥಾನಗಳಿಗೆ ಮತ ದಾನ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡ ಳಿತ ಎಲ್ಲಾ ರೀತಿಯ ಸಿದ್ಧತೆಯಲ್ಲಿ ತೊಡಗಿದ್ದು, ಗುಂಡ್ಲುಪೇಟೆ ಪುರಸಭೆ, ಯಳಂ ದೂರು ಹಾಗೂ ಹನೂರು ಪಟ್ಟಣ ಪಂಚಾಯ್ತಿಗಳಿಗೆ ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ.

ಲೋಕಸಭಾ ಚುನಾವಣೆಗೂ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿರುವುದರಿಂದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಬಿಎಸ್‍ಪಿ ಹಾಗೂ ಎಸ್‍ಡಿಪಿಐ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿವೆ.

ಅಧಿಕಾರ ಹಿಡಿಯಲು ಈ ಪಕ್ಷಗಳು ಎಲ್ಲಾ ರೀತಿಯ ತಂತ್ರಗಾರಿಕೆಯಲ್ಲಿ ತೊಡಗುವುದು ಸುಳ್ಳಲ್ಲ. ಕಾಂಗ್ರೆಸ್ ಭದ್ರಕೋಟೆ ಆಗಿರುವ ಜಿಲ್ಲೆಯಲ್ಲಿ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ ‘ಕೈ’ ವಶದಲ್ಲಿ ಇದೆ. ಇದನ್ನು ಉಳಿಸಿಕೊಳ್ಳುವುದು ಆ ಪಕ್ಷಕ್ಕೆ ಸವಾಲಾಗಿ ಪರಿಗಣಿಸಿದೆ. ಕಾಂಗ್ರೆ ಸ್‍ನ ‘ಕೋಟೆ’ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಲಗ್ಗೆ ಹಾಕಿರುವ ಬಿಜೆಪಿ ಹಾಗೂ ಬಿಎಸ್‍ಪಿ ಈ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲೀ ತನ್ನ ಪ್ರಾಬಲ್ಯ ತೋರ್ಪಡಿಸಲು ಸಜ್ಜಾಗುತ್ತಿದೆ.

ಚಾಮರಾಜನಗರ ನಗರಸಭೆಯಲ್ಲಿ ಕಳೆದ ಅವಧಿಯಲ್ಲಿ 4 ಸ್ಥಾನದಲ್ಲಿ ಗೆದ್ದು ಇತಿಹಾಸ ಸೃಷ್ಟಿಸಿದ್ದ ಎಸ್‍ಡಿಪಿಐ ಈ ಚುನಾ ವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳು ವುದನ್ನು ಅಲ್ಲಗಳೆಯುವಂತಿಲ್ಲ. ಇದೇ ಪ್ರಥಮ ಬಾರಿಗೆ ಗೆಲುವು ಸಾಧಿಸಿ ಶಾಸಕ ರಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿ ರುವ ಬಿಎಸ್‍ಪಿಯ ಎನ್.ಮಹೇಶ್ ಹಾಗೂ ಜೆಡಿಎಸ್ ಈ ಚುನಾವಣೆಯನ್ನು ಯಾವ ರೀತಿಯಲ್ಲಿ ಪರಿಗಣಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಆಕಾಂಕ್ಷಿಗಳ ದುಂಬಾಲು: ಚುನಾವಣಾ ಆಯೋಗ ನಗರಸಭೆಗಳಿಗೆ ಮತದಾನದ ದಿನಾಂಕ ಪ್ರಕಟಿಸುತ್ತಿದ್ದಂತೆಯೇ ಪ್ರಮುಖ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಪಕ್ಷದ ಅಧ್ಯ ಕ್ಷರು, ನಾಯಕರು ಹಾಗೂ ಜನಪ್ರತಿನಿಧಿ ಗಳು ದುಂಬಾಲು ಬಿದ್ದಿದ್ದಾರೆ. ಇಂತಹ ವಾರ್ಡ್‍ನಲ್ಲಿ ನಮಗೆ ಟಿಕೆಟ್ ನೀಡಬೇಕು. ಈ ವಾರ್ಡ್ ನಮಗೆ ಪೂರಕವಾಗಿದೆ ಎಂದು ಆಕಾಂಕ್ಷಿಗಳು ತಮ್ಮದೇ ಆದ ಲೆಕ್ಕಾ ಚಾರವನ್ನು ಮುಖಂಡರಿಗೆ ವಿವರಿಸ ತೊಡಗಿದ್ದಾರೆ. ಪ್ರಮುಖ ಪಕ್ಷಗಳಲ್ಲಿ ಒಂದೊಂದು ವಾರ್ಡ್‍ಗೆ ತಲಾ ಮೂರು- ನಾಲ್ಕು ಮಂದಿ ಆಕಾಂಕ್ಷಿಗಳು ಇರುವುದು ಆ ಪಕ್ಷದ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದೇ ತಿಂಗಳ 10ರಂದು ಅಧಿಸೂಚನೆ ಹೊರಬೀಳಲಿದೆ. ಇದಕ್ಕಾಗಿ ಇನ್ನು ಕೇವಲ 7 ದಿನ ಮಾತ್ರ ಬಾಕಿ ಇರು ವುದರಿಂದ ಸ್ಥಳೀಯ ರಾಜಕೀಯ ಚುನಾವಣೆ ಮತ್ತಷ್ಟು ಬಿರುಸುಗೊಳ್ಳಲಿದೆ.

ಚುನಾವಣಾ ವೇಳಾಪಟ್ಟಿ

ಅಧಿಸೂಚನೆ ಹೊರಡಿಸುವ ದಿನಾಂಕ: 10-08-2018
ನಾಮಪತ್ರ ಸಲ್ಲಿಸುವ ಕೊನೆ ದಿನಾಂಕ: 17-08-2018
ನಾಮಪತ್ರ ಪರಿಶೀಲನೆ: 18-08-2018
ಉಮೇದುವಾರಿಕೆ ವಾಪಸ್‍ಗೆ ಕೊನೆ ದಿನ: 20-08-2018
ಮತದಾನ: 29-08-2018
ಮರು ಮತದಾನ ಇದ್ದಲ್ಲಿ: 31-08-2018
ಮತ ಎಣಿಕೆ: 01-09-2018