ಮೈಸೂರು-ಚಾ.ನಗರ ರೈಲು ಮಾರ್ಗ ವಿದ್ಯುದ್ದೀಕರಣ: 20 ಕೋಟಿ ಯೋಜನೆಗೆ ಟೆಂಡರ್

ಮೈಸೂರು,ಫೆ.13(ಆರ್‍ಕೆ)-ಬಹು ನಿರೀಕ್ಷಿತ ಮೈಸೂರು ಮತ್ತು ಚಾಮರಾಜನಗರ ನಡು ವಿನ ರೈಲು ಮಾರ್ಗ ವಿದ್ಯುದ್ದೀಕರಣಕ್ಕೆ ರೈಲ್ವೆ ಇಲಾಖೆಯು ಮುಂದಾಗಿದೆ.

ರೈಲು ಹಳಿ ವಿದ್ಯು ದ್ದೀಕರಣ ಯೋಜನೆಗಾಗಿ ಟೆಂಡರ್ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಿ 12 ತಿಂಗಳೊಳಗಾಗಿ ಪೂರ್ಣ ಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಸೆಂಟ್ರಲ್ ಆರ್ಗನೈಸೇಷನ್ ಫಾರ್ ರೈಲ್ವೆ ಎಲೆಕ್ಟ್ರಿಫಿಕೇಷನ್ (ಅಔಖಇ) ಸಂಸ್ಥೆಯು ವಿನ್ಯಾಸ, ಪೂರೈಕೆ, ಎರೆಕ್ಷನ್, ಟೆಸ್ಟಿಂಗ್ ಮತ್ತು ಕಮಿಷನಿಂಗ್ ಕಾರ್ಯಕ್ಕೆ ಈಗಾ ಗಲೇ ಟೆಂಡರ್ ಆಹ್ವಾನಿಸಿದೆ. 71 ಕಿ.ಮೀ. ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲು 20.2 ಕೋಟಿ ರೂ. ಅಂದಾಜು ವೆಚ್ಚದ ಯೋಜನೆಯನ್ನು ಗರ್ಗಾನ್‍ನ ಪವರ್‍ಗುರು ಇನ್‍ಫ್ರಾ ಟೆಕ್ ಪ್ರೈವೇಟ್ ಲಿಮಿಟೆಡ್‍ಗೆ ಜ.22ರಂದು ಟೆಂಡರ್ ನೀಡಲಾಗಿದ್ದು, ಒಂದು ವರ್ಷದಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಈ ಯೋಜನೆ ಪೂರ್ಣಗೊಂಡಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಮೈಸೂರು-ಬೆಂಗಳೂರು-ಚೆನ್ನೈ ವಿದ್ಯುತ್ ರೈಲು ಹಳಿ ಮಾರ್ಗಕ್ಕೆ ಸಂಪರ್ಕಗೊಳಿಸಲಾಗುವುದು. ನಂತರ ಮೈಸೂರು-ಚಾಮರಾಜನಗರ ವಿಭಾಗದ ಮಾರ್ಗಕ್ಕೆ ಮೆಮು (Main Electric Multiple Unit) ರೈಲುಗಳನ್ನೂ ಪರಿಚಯಿಸ ಬಹುದಾಗಿದೆ. ಚಾಮರಾಜನಗರ ಮಾರ್ಗದಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ನಿರಂತರವಾಗಿ ಓಡಾಡುತ್ತಿದ್ದು, ಕಡಕೊಳ, ಸುಜಾತಪುರಂ, ನಂಜನಗೂಡು, ಬದನಗುಪ್ಪೆ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಾಗುವುದು. ಕಡಕೊಳ ಸಮೀಪ ಕಂಟೇನರ್ ಕಾರ್ಪೊ ರೇಷನ್ ಆಫ್ ಇಂಡಿಯಾದಿಂದ ನಿರ್ಮಾಣವಾಗುತ್ತಿರುವ ಇನ್‍ಲ್ಯಾಂಡ್ ಕಂಟೇನರ್ ಯಾರ್ಡ್ ನಿರ್ಮಿಸುತ್ತಿರುವುದರಿಂದ ಕೈಗಾರಿಕಾ ಉತ್ಪನ್ನಗಳು ಹಾಗೂ ಕಚ್ಛಾ ಸಾಮಗ್ರಿ ಸಾಗಣೆಗೂ ವಿದ್ಯುತ್ ರೈಲು ಹಳಿ ಮಾರ್ಗದಿಂದ ಅನುಕೂಲವಾಗಲಿದೆ.