ವೈದ್ಯಕೀಯ ಕಾಲೇಜುಗಳ ಸಬಲೀಕರಣವಾಗಲಿ

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಮತ
ಮೈಸೂರು: ಸರ್ಕಾರಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕಾದರೆ ಸರ್ಕಾರಗಳು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುವುದನ್ನು ನಿಲ್ಲಿಸಬೇಕು ಎಂದು ಹೃದ್ರೋಗ ತಜ್ಞ ಹಾಗೂ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟರು.

ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಆಡಳಿತ ವ್ಯವಸ್ಥೆ ಯಲ್ಲಿ ಅನುದಾನಕ್ಕಿಂತ ಅನುಷ್ಠಾನ ಮುಖ್ಯ. ಹೊಸ ಕಾಲೇಜುಗಳನ್ನು ತೆರೆಯುವ ಬದಲು ಇರುವ ವೈದ್ಯಕೀಯ ಕಾಲೇಜುಗಳನ್ನು ಸಬಲೀಕರಣಗೊಳಿಸುವ ಮೂಲಕ ಅಭಿವೃದ್ಧಿ ಮಾಡಬೇಕು. ಹೊಸದಾಗಿ ಆಸ್ಪತ್ರೆ, ಕಟ್ಟಡ ಗಳನ್ನು ಕಟ್ಟುತ್ತಾ ಹೋದರೆ ಇರುವ ಆಸ್ಪತ್ರೆ, ಕಾಲೇಜುಗಳಿಗೆ ತುಂಬಾ ತೊಂದರೆಯಾ ಗುತ್ತದೆ. ಹಾಗಾಗಿ ಇರುವ ಆಸ್ಪತ್ರೆಗಳನ್ನು ಹೆಚ್ಚು ಬಲಪಡಿಸಬೇಕು. ಹಾಗಾಗಿ ಆಡಳಿತ ಹಾಗೂ ಆರ್ಥಿಕ ಅಧಿಕಾರದ ವಿಕೇಂದ್ರೀ ಕರಣವಾಗಬೇಕು ಎಂದು ಹೇಳಿದರು.

ಜತೆಗೆ ವೈದ್ಯಕೀಯ ಸಂಸ್ಥೆಗಳಿಗೆ ನಿರ್ದೇಶಕರನ್ನು ನೇಮಿಸುವಾಗ ವಯಸು ಮತ್ತು ಹಿರಿತನವನ್ನು ಮಾತ್ರ ಪರಿಗಣಿಸುವ ಬದಲು ಉತ್ತಮ ನಾಯಕತ್ವ, ಸಕಾರಾತ್ಮಕ ಚಿಂತನೆ, ಮಾನವೀಯತೆ ಇರುವ ವೈದ್ಯ ರನ್ನು ನೇಮಿಸಬೇಕು. ಕೆಲವು ನಿರ್ದೇಶಕರು ಸಮರ್ಥರಾಗಿದ್ದರೂ ವ್ಯವಸ್ಥೆಗೆ ಹೆದರು ತ್ತಾರೆ. ಇನ್ನೆರಡು ವರ್ಷ ಸೇವಾವಧಿ ಇದೆ. ನಾನೇಕೇ ಮೈಮೇಲೆ ಎಳೆದು ಕೊಳ್ಳಲಿ ಎನ್ನುತ್ತಾರೆ ಎಂದರು.

ಜಯದೇವ ಆಸ್ಪತ್ರೆ ಶೇ.400ರಷ್ಟು ಪ್ರಗತಿ ಸಾಧಿಸಿದ್ದು, 50 ಲಕ್ಷ ಜನರಿಗೆ ಚಿಕಿತ್ಸೆ ನೀಡಿದೆ. ಖಾಸಗಿ ಆಸ್ಪತ್ರೆಗಳನ್ನು ಮೀರಿಸು ವಂತಹ ಸೌಲಭ್ಯಗಳು ನಮ್ಮಲ್ಲಿವೆ. ಹಾಗಾಗಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕೆಂದು ಮೈಸೂರು, ಗುಲ್ಬರ್ಗದಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆ ಮಾಡಲಾಗಿದೆ. ಇದಕ್ಕಾಗಿ 2010ರಲ್ಲಿ ಸರ್ಕಾರ 5 ಕೋಟಿ ಮೀಸಲಿಟ್ಟಿತ್ತು. ಕೇವಲ 11 ತಿಂಗಳಲ್ಲೇ ಮೈಸೂರಿನಲ್ಲಿ ಜಯದೇವ ಹೃದ್ರೋಗ ಸಂಸ್ಥೆ 15 ಕೋಟಿ ವೆಚ್ಚದಲ್ಲಿ ಸ್ಥಾಪನೆ ಮಾಡಿದೆವು. ಸರ್ಕಾರ ಕೊಟ್ಟಿದ್ದು ಕೇವಲ 5 ಕೋಟಿ ಖರ್ಚು ಆಗಿದ್ದು 15 ಕೋಟಿ, ಉಳಿದ 10 ಕೋಟಿಯನ್ನು ದೇಣಿಗೆ ಸಂಗ್ರಹ ಮಾಡಿ ಸ್ಥಾಪನೆ ಮಾಡಲಾಯಿತು. ಇದುವರೆಗೆ ಮೈಸೂರು ಜಯದೇವ ಹೃದ್ರೋಗ ಸಂಸ್ಥೆಯಿಂದ 5 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದೇವೆ ಎಂದರು.

ಜಯದೇವ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿ 110 ಹಾಸಿಗೆ ಮಾತ್ರ ಇದೆ. ಹಾಗಾಗಿ 350 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಇದಕ್ಕೆ ಸಿದ್ದರಾಮಯ್ಯ 150 ಕೋಟಿ ಅನುದಾನ ನೀಡಿದ್ದರು. ಇಂದು ಪಿ.ಕೆ. ಸ್ಯಾನಿಟೋರಿಯಂ ಆವರಣ ಮೈಸೂರಿನ ರಾಜ ಮನೆತನಕ್ಕೆ ಸೇರಿದ ಜಾಗದಲ್ಲಿ ಸರ್ಕಾರದ 150 ಕೋಟಿ ಅನುದಾನದ ಜತೆಗೆ ಜಯದೇವ ಹೃದ್ರೋಗದ ಆಂತರಿಕ ಬಜೆಟ್‍ನಿಂದ 70 ಕೋಟಿ ಸೇರಿದಂತೆ ಸುಮಾರು 220 ಕೋಟಿ ರೂ. ವೆಚ್ಚದಲ್ಲಿ ಹೃದಯ ಮಂದಿರ ನಿರ್ಮಿಸಲಾಗಿದೆ ಎಂದು ಹೇಳಿದರು.

ಜಯದೇವ ಆಸ್ಪತ್ರೆಯಲ್ಲಿ ಮುಂಗಡ 2 ಸಾವಿರ ರೂ. ಹಣ ಕಟ್ಟುವ ನಿಯಮವಿತ್ತು. ಆ ನಿಯಮ ರಚಿಸಿದವರೂ ನಮ್ಮಂತೆ ವೈದ್ಯರೇ. ಹಾಗಾಗಿ ನಾನು ಯಾವುದೇ ರೋಗಿ ತುರ್ತು ಚಿಕಿತ್ಸೆಗೆ ಬಂದ ವೇಳೆ ಅವರ ಬಳಿ ಹಣ ಇರಲಿ. ಇಲ್ಲದಿರಲಿ ದಾಖಲಿಸಿ ಕೊಂಡು ಚಿಕಿತ್ಸೆ ನೀಡಬೇಕು ಎಂಬ ನಿಯಮ ರಚಿಸಿದೆ. ಹಾಗಾಗಿ ಹಳೇ ಕಾನೂನುಗಳಿಗೆ ಬದಲಾವಣೆ ತಂದು, ಕಾಲಕಾಲಕ್ಕೆ ತಿದ್ದುಪಡಿ ತಂದು ಸುಧಾರಣೆ ತರಬೇಕು ಎಂದರು.

ಮಾನವೀಯತೆಯೇ ಮಾನದಂಡ ವಾಗಬೇಕು: ಜೀವನ ಅರ್ಥ ಮಾಡಿಕೊಳ್ಳಲು ಆಸ್ಪತ್ರೆಯ ರೋಗಿಗಳು, ಜೈಲಿನ ಕೈದಿಗಳು, ರುದ್ರಭೂಮಿಗೆ ಹೋದರೆ ಬದುಕು ಎಷ್ಟು ಮುಖ್ಯವೆಂದು ತಿಳಿಯುತ್ತದೆ. ಕಳೆದ 12 ವರ್ಷದಲ್ಲಿ ನನ್ನ ಗಮನಕ್ಕೆ ಬಂದ ಯಾವುದೇ ರೋಗಿಯನ್ನು ಹಣಕ್ಕೋಸ್ಕರ ವಾಪಸ್ ಕಳುಹಿಸಿಲ್ಲ. ಮಾನವೀಯತೆ ಒಂದು ಸಾಗರ ವಿದ್ದಂತೆ. ಅದರ ಮೇಲೆ ವಿಶ್ವಾಸವಿರ ಬೇಕು. ಹಾಗಾಗಿ ಮಾನವೀಯತೆಯೇ ಮಾನದಂಡವಾಗಬೇಕು ಎಂದರು.

ಬಡವರನ್ನು ಕಣ್ಣಿನಿಂದ ಗುರುತಿಸಬೇಕು: ಬಿಪಿಎಲ್ ಕಾರ್ಡ್‍ದಾರರಿಗೆ ಉಚಿತ ಚಿಕಿತ್ಸೆ ಕೊಡಲಾಗುತ್ತಿದೆ. ಕೆಲವರಿಗೆ ಬಿಪಿಎಲ್ ಕಾರ್ಡ್ ಇರಲ್ಲ. ಅಂಥವರಿಗೂ ಚಿಕಿತ್ಸೆ ನೀಡುತ್ತಿದ್ದೇವೆ. ಆದರೆ, ಯಮಕಿಂಕರರಂತಿ ರುವ ಲೆಕ್ಕ ಪರಿಶೋಧಕರು ಇಷ್ಟು ಕೋಟಿ ಖರ್ಚು ಮಾಡಿದ್ದೀರಾ? ಕಡತ ಎಲ್ಲಿ ಎಂದು ಪ್ರಶ್ನಿಸುತ್ತಾರೆ. ರೋಗಿಗಳು ಅವರ ಕಣ್ಣಿಗೆ ಕಾಣಿಸುವುದಿಲ್ಲ. ಹೀಗಾಗಿ ಬಡವ ರನ್ನು ನಾವು ಕಣ್ಣಿನಿಂದ ಗುರುತಿಸುವ ಕಾನೂನನ್ನು ಜಾರಿ ಮಾಡಿದ್ದೇವೆ. ಇದು ಬಿಪಿಎಲ್ ಕಾರ್ಡ್‍ಗಿಂತ ಹೆಚ್ಚು ಮಹತ್ವ ಹೊಂದಿದೆ ಎಂದು ಹೇಳಿದರು.

ಜಯದೇವಕ್ಕೆ ಬಡ ರೋಗಿಗಳೇ ವಿಐಪಿ: ಜಯದೇವ ಹೃದ್ರೋಗ ಆಸ್ಪತ್ರೆ ಯಲ್ಲಿ ಬಡವರೇ ವಿಐಪಿಗಳು. ಶ್ರೀಮಂತರು ಬಂದು ಡಿಸ್ಕೌಂಟ್ ಕೇಳಿದಾಗ ತುಂಬಾ ಬೇಜಾರಾಗುತ್ತದೆ. ಬಡವರು ಎಂದೂ ಸುಳ್ಳು ಹೇಳುವುದಿಲ್ಲ. ಶ್ರೀಮಂತರು ಸ್ವಲ್ಪ ಹೆಚ್ಚು ಸುಳ್ಳು ಹೇಳು ತ್ತಾರೆ. ವೈದ್ಯಕೀಯ ಕ್ಷೇತ್ರ ವ್ಯಾಪಾರೀ ಕರಣವಾಗಿದೆ, ವೈದ್ಯರ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಿ ದ್ದಾರೆ. ವೈದ್ಯರು ರೋಗಿಯ ಸಂಬಂ ಧಿಕರಿಗೆ ನಿಜ ಹೇಳಬೇಕು ಎಂದ ಅವರು, ನಾನು ಆಸ್ಪತ್ರೆಯಿಂದ ನಿರ್ಗ ಮಿಸಿದರೂ ಮಾನವೀಯತೆ ನೆಲೆಗಟ್ಟಿನಲ್ಲಿ ಚಿಕಿತ್ಸೆ ನೀಡುವ ಕೆಲಸ ಆಗಬೇಕು ಎಂಬುದು ನನ್ನ ಆಸೆ ಎಂದರು.

ಇದೇ ಸಂದರ್ಭದಲ್ಲಿ `ದವನ’ ಅಭಿ ನಂದನಾ ಗ್ರಂಥ ಬಿಡುಗಡೆಗೊಳಿಸಲಾಯಿತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಜಮಾತೆ ಪ್ರಮೋದಾದೇವಿ ಒಡೆಯರ್, ಡಾ.ಸಿ.ಎನ್.ಮಂಜುನಾಥ್ ಪತ್ನಿ ಡಾ.ಅನಸೂಯಾ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪೆÇ್ರ.ಕೆ.ಎಸ್.ರಂಗಪ್ಪ, ಸಾಹಿತಿ ಸಿ.ಪಿ.ಕೃಷ್ಣಕುಮಾರ್, ಡಾ.ಕೆ.ಎಸ್. ರವೀಂದ್ರನಾಥ್ ಉಪಸ್ಥಿತರಿದ್ದರು.